ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ- Robert Ludlum in Kannada

Home / Blog / ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ- Robert Ludlum in Kannada

ಆಂಗ್ಲ ಕತೆಗಾರ ಪರಿಚಯ ಮಾಲಿಕೆ-೫
~~~~~~~~~~~~~~~~~~~~~~~~~~~~
ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ
~~~~~~~~~~~~~~~~~~~~~~~~~~~~~


ರಾಬರ್ಟ್ ಲ್ಯುಡ್ಲಮ್(೧೯೨೭-೨೦೦೧) ಪುಸ್ತಕದಂಗಡಿ ಮತ್ತು ಚಲನಚಿತ್ರರಂಗ ಎರಡರಲ್ಲೂ ಜಾದೂ ಸೃಷ್ಟಿಸಿ ಮಾಯವಾದ ಅಪ್ರತಿಮ ಗೂಡಚರ್ಯೆ ಮತ್ತು ರಹಸ್ಯ ಕಾದಂಬರಿಕಾರ.
ಇಂಗ್ಲೀಷ್ ಚಲನಚಿತ್ರ ವೀಕ್ಷಕರಿಗೆ ಚಿರಪರಿಚಿತವಾದ ಬೌರ್ನ್ ( Bourne) ಎಂಬ ಅಮ್ನೀಸಿಯಾ ( ಸ್ಮೃತಿನಾಶ, ವಿಸ್ಮೃತಿ) ದಿಂದ ನರಳುತ್ತಿರುವ ಸಿ ಐ ಎ ಹತ್ಯೆಗಾರನ ಸುತ್ತ ಹೆಣೆದ ಸಾಹಸಮಯ ಸಸ್ಪೆನ್ಸ್ ಯುಕ್ತ ಸರಣಿ ವೃತ್ತಾಂತ ನಾಲ್ಕು ಪುಸ್ತಕಗಳಾಗಿ ಪ್ರಕಟವಾಗಿ ಅತ್ಯಧಿಕ ಮಾರಾಟದ ದಾಖಲೆಗಳನ್ನು ಮುರಿದು ೧೯೮೦-೯೦ರಲ್ಲಿ ಗೂಡಚರ್ಯೆ ಕಾದಂಬರಿಗಳ ಹೊಸಯುಗ ಸೃಷ್ಟಿಮಾಡಿತು.

ಒಟ್ಟಾರೆ ಲುಡ್ಲಮ್ ೨೭ ಕಾದಂಬರಿಗಳನ್ನು ರಚಿಸಿದರೆ, ಅವು ಸುಮಾರು ೫೦ ಕೊಟಿ ಪ್ರತಿಗಳಿಗೂ ಹೆಚ್ಚಿಗೆ ಮಾರಾಟವಾಗಿದೆ ಎಂಬ ದಾಖಲೆಯಿದೆ. ೩೩ ಭಾಷೆಗಳಲ್ಲಿ, ೪೦ ದೇಶಗಳಲ್ಲಿ ಇವರ ಕಾದಂಬರಿಗಳು ಪ್ರಕಾಶ ಕಂಡಿವೆ.
ಮೊದಲು ಅಮೆರಿಕನ್ ಮೆರೀನ್ ಸೈನ್ಯದಲ್ಲಿದ್ದು ಹೊರಬಂದು ನಂತರ ಅಲ್ಲಿನ ನಾಟಕ ರಂಗದಲ್ಲಿ ಜನಪ್ರಿಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. ಐದಾರು ಸೂಪರ್ ಹಿಟ್ ಚಲನಚಿತ್ರಗಳು, ಮಿನಿ ಧಾರಾವಾಹಿ ಟಿ ವಿ ಸರಣಿಗಳು ಇವರ ಕೀರ್ತಿ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇದರಲ್ಲಿ ಅತಿ ಹೆಚ್ಚು ಜನಜನಿತವಾದ “ಜೇಸನ್ ಬೌರ್ನ್” ಎಂಬ ನಾಯಕ ಮೊದಲ ಕಂತಿನಲ್ಲೇ ತನ್ನ ಬಗ್ಗೆ ಎಲ್ಲಾ ಮರೆತು ಎಲ್ಲೋ ಗಾಯಗೊಂಡು ಎದ್ದೇಳುತ್ತಾನೆ..ತಾನ್ಯಾರೆಂಬ ಅರಿವಲ್ಲದ ಅವನನ್ನು ಸರಕಾರಿ ಗೂಡಚರ್ಯೆ ವಿಭಾಗದ ಒಂದು ಗುಪ್ತ ಗುಂಪು (ಟ್ರೆಡ್ ಸ್ಟೋನ್) ದೇಶ ವಿದೇಶಗಳಲ್ಲಿ ಅವನನ್ನು ಬೇಟೆಯಾಡಲು ಸುಪಾರಿ ಕೊಲೆಗಡುಕರನ್ನು ಕಳಿಸುತ್ತದೆ. ಅವನು ನಿಜಕ್ಕೂ ಯಾರು? ಈಗೇಕೆ ಅವರಿಗೆ ವೈರಿಯಂತೆ ಕಾಣುತ್ತಿದ್ದಾನೆ, ಅವನು ತನ್ನ ಸ್ಮೃತಿ ವಾಪಸ್ ಪಡೆಯಲು ಎಂತೆಂತಾ ಹರಸಾಹಸ ಮಾಡಬೇಕಾದೀತು ಎಂದು ಅವನಿಗೆ ತಿಳಿಯದಂತೆ ಒಂದಾದ ಮೇಲೊಂದು ಘಟನೆಗಳು ನೇಯಲ್ಪಡುತ್ತವೆ. ಇದೊಂದು ಅತ್ಯಧ್ಬುತ ರೀತಿಯ ಸಸ್ಪೆನ್ಸ್ ಕಥಾವಸ್ತು. ಒಂದೊಂದು ಕಾದಂಬರಿ/ ಚಿತ್ರದ ಅಂತ್ಯವೂ ಇನ್ನೊಂದು ಕಂತಿಗೆ ಆಸ್ಪದ ಮಾಡಿಕೊಡುವಂತಿರುತ್ತದೆ.
ಲುಡ್ಲಮ್ ಇದನ್ನು ನಾಲ್ಕು ಭಾಗಗಳಲ್ಲಿ ಹಂಚಿದರೆ ಹಾಲಿವುಡ್ ಚಿತ್ರರಂಗ ಕೂಡ ಅದನ್ನು ಹಿಂಬಾಲಿಸಿ, ಒಬ್ಬನೆ ನಟ “ಮ್ಯಾಟ್ ಡೇಮನ್” ಎಂಬವನನ್ನು ಆಯ್ದು ಜೇಮ್ಸ್ ಬಾಂಡ್ ಫ಼್ರಾಂಚೈಸಿ ಯಂತೆ ಚಿತ್ರಗಳನ್ನು ಬಿಡುಗಡೆ ಮಾಡುತ್ತಲೆ ಹೋಯಿತು. ಹಾಗೆ ವಿಶ್ವದಾಖಲೆ ಮುರಿವ ಒಂದು ಯಶಸ್ವಿ ಸರಣಿಯಾಯಿತು. ಇವಲ್ಲದೇ ಇದೇ ರೀತಿಯ ಕಥಾವಸ್ತು ಭಿನ್ನತೆ, ಅಂತರ ರಾಷ್ಟ್ರೀಯ ಸಂಚುಕೋರರ ಪ್ರಸಂಗಗಳಿದ್ದ ೧೯೮೦-೯೦ ರ ದಶಕದ ಆಸ್ಟರ್ ಮನ್ ವೀಕೆಂಡ್, ಹೋಲ್ ಕ್ರಾಫ್ಟ್ ಕೋವೆನೆಂಟ್, ರೈನೆಮನ್ ಎಕ್ಸ್ಚೇಂಛ್ ಇತ್ಯಾದಿ ಕಾದಂಬರಿಗಳನ್ನು ಅಂಗಡಿಗಳಲ್ಲಿ ಕೊಳ್ಳುವವರು ಇನ್ನೂ ಕಡಿಮೆಯಾಗಿಲ್ಲ.
ಇವರ ಬೌರ್ನ್ ಸರಣಿ ಕಾದಂಬರಿಯಲ್ಲಿ ಬೌರ್ನ್ ಐಡೆಂಟಿಟಿ, ಬೌರ್ನ್ ಸುಪ್ರಿಮೆಸಿ, ಬೌರ್ನ್ ಅಲ್ಟಿಮೇಟಮ್. ಬೌರ್ನ್ ಲೆಗೆಸಿ ಸೇರಿವೆ. ಒಮ್ಮೆ ಓದಿ ಅದರ ರುಚಿಯನ್ನು ಸವಿಯಲೇಬೇಕು ಎಂಬಂತಿರುತ್ತದೆ.

ಇವರ ಸಾವು ಕೂಡಾ ಒಂದು ಒಗಟು ಎಂದು ಹೇಳುವವರಿದ್ದಾರೆ!. ಇವರು ಅಗ್ನಿ ಅಫಘಾತದಲ್ಲಿ ಸತ್ತರೆಂದೂ, ಹೃದಯಾಘಾತವಾಯಿತೆಂದೂ ಎರಡು ವಿವಾದಾಸ್ಪದ ಸುದ್ದಿಗಳು ಅಲ್ಲಿನ ಮಾಧ್ಯಮದಲ್ಲಿ ಪ್ರಚಲಿತವಿದೆಯಂತೆ. ಕೋಟ್ಯಧಿಪತಿಯಾದ ಲುಡ್ಲಮ್ ಅಮೆರಿಕದ ಫ್ಲಾರೀಡಾದಲ್ಲಿ ೦೨೦೦೧ ರಲ್ಲಿ ಮೃತರಾದರೂ, ಅವರ ಕತೆಗಳ ಪಾತ್ರಾಧರಿತ ಇನ್ನೂ ಎರಡು ಚಿತ್ರಗಳು ಬರುವುದರಲ್ಲಿದೆಯಂತೆ!

ಇವರ ಕತೆಗಳ ರೇಟಿಂಗ್ ೪.೫/ ೫ ಗಿಂತಾ ಕಡಿಮೆಯಿರಲು ಸಾಧ್ಯವೆ ಇಲ್ಲ, ನನ್ನಭಿಪ್ರಾಯದಲ್ಲಿ.
ಇವರ ಕಾದಂಬರಿಗಳು ಕನ್ನಡದಲ್ಲಿ ಆನುವಾದವಾಗಿ ಬಂದ ಬಗ್ಗೆ ನನಗೆ ಮಾಹಿತಿಯಿಲ್ಲ, ಓದಿದವರು ತಿಳಿಸಬಹುದು

Share this!

3 Comments

Leave a Reply

Your email address will not be published. Required fields are marked *