James Hadley Chase – Introduction in Kannada

Home / General / James Hadley Chase – Introduction in Kannada

ಆಂಗ್ಲ ಕಾದಂಬರಿಕಾರ ಪರಿಚಯ ಮಾಲಿಕೆ -೧:
~~~~~~~~~~~~~~~~~~~~~~~~~~
ಚೇಸ್ ಎಂಬ ಮಾಂತ್ರಿಕ ಕತೆಗಾರ
———————————————–

ನಾನು ಮೊದಲೇ ಪತ್ತೇದಾರಿ/ ಸಾಹಸ ಕತೆಗಳ ಪ್ರಿಯನೂ, ಅದರಲ್ಲೇ ಸಾಹಿತ್ಯಸೇವೆ ಮಾಡಲೂ ಹೊರಟವನೂ ಆದ್ದರಿಂದ ಪತ್ತೇದಾರಿ ಸಾಹಿತ್ಯಕ್ಕೆ ತನ್ನದೇ ಆದ ಗೌರವಾನ್ವಿತ ಸ್ಥಾನ, ಚರಿತ್ರೆ ಮತ್ತು ಸಂಪ್ರದಾಯ ಇರುವ ಅಂತಾ ಆಂಗ್ಲ ಕತೆಗಾರರನ್ನೇ ಮೊದಲು ಆರಿಸಿಕೊಳ್ಳುತ್ತೇನೆ.
ಜೇಮ್ಸ್ ಹ್ಯಾಡ್ಲಿ ಚೇಸ್ (೧೯೦೬-೧೯೮೫) ಎಂಬ ಅನ್ವರ್ಥನಾಮದಿಂದ ಬರೆದ ರೇನೆ ರೇಮಂಡ್ ಬಹಳ ಕಾಲ ಪ್ಯಾರಿಸ್ಸಿನಲ್ಲಿ ಬದುಕಿದ ಇಂಗ್ಲೆಂಡ್ ಮೂಲದ ಕತೆಗಾರ. ಸುಮಾರು ೯೦ ಪತ್ತೇದಾರಿ/ ಅಪರಾಧ/ ಸಾಹಸ ಕತೆಗಳ ಕಾದಂಬರಿಗಳನ್ನು ಮೂರ್ನಾಲ್ಕು ಕಾವ್ಯನಾಮಗಳಲ್ಲಿ ಬರೆದಿದ್ದರೂ ಹಲವು ಪೀಳಿಗೆಗಳ ಲೇಖಕರಿಗೆ ಸ್ಪೂರ್ತಿಯಾದವರು ಚೇಸ್ ಹೆಸರಿಂದಲೇ ಜನಪ್ರಿಯ. ಅವರನ್ನು “ಥ್ರಿಲ್ಲರ್ ಮೆಸ್ರೋ ಆಫ್ ಅವರ್ ಜೆನರೇಷನ್” ಎಂದೂ, `ಕಿಂಗ್ ಆಫ್ ಥ್ರಿಲ್ಲರ್ ರೈಟರ್ಸ್’ ಎಂದೂ ಕರೆಯಲಾಗುತ್ತದೆ.
೧೯೭೦-೮೦ ರ ದಶಕದಲ್ಲಿ ಯುವಕರಾಗಿದ್ದು ಆಂಗ್ಲ ಕಾದಂಬರಿಗಳನ್ನು ಓದುತ್ತಿದ್ದವರಿಗಂತೂ ಚೇಸ್ ಕಾದಂಬರಿಗಳು ಎಂದರೆ ದಿನ ಬೆಳಗಿನ ಕಾಫಿಯಂತೆಯೇ ಅಮೂಲ್ಯ ಹಾಗು ಅನಿವಾರ್ಯ ಚಟುವಟಿಕೆಯಾಗಿತ್ತು. ನಿಮ್ಮಲ್ಲಿಯೂ ಅಂತಾ ಕೆಲವರು ಓದುಗರು ಇದ್ದಿರಬಹುದು.
ಚೇಸ್ ಅವರ ನ್ವಾರ್ (noir) ಶೈಲಿಯ ಅಪರಾಧ ಪ್ರಧಾನ ಕತೆಗಳಿಗೆ ಗುರು ಅಮೆರಿಕನ್ ಕಾದಂಬರಿಕಾರ ರೇಮಂಡ್ ಚಾಂಡ್ಲರ್ ಎನ್ನುತ್ತಾರೆ. ಆದರೆ ಚೇಸ್ ಅವರ ನಕಲು ಮಾಡಲಿಲ್ಲ, ತಮ್ಮದೇ ಆದ ಕ್ರೈಮ್ ಲೋಕವನ್ನೇ ಸೃಷ್ಟಿಸಿದರು.
ಚೇಸ್ ಅವರ ಕಾದಂಬರಿಗಳು ಹಲವು ವೈವಿಧ್ಯತೆಯಿಂದ ಕೂಡಿರುತ್ತಿದ್ದರೂ ಮೂಲಭೂತ ಕಥಾವಸ್ತುವಿನ ತಿರುಳು ಒಂದೇ ಇರುತ್ತಿತ್ತು:
ಉದಾಹರಣೆಗೆ: ಸುಂದರ ಆದರೆ ಅಪರಾಧಿ ಮನೋಭಾವದ ಸಾಕಾರವಾದ ತಂತ್ರಗಾತಿ ನಾಯಕಿ, ದಡ್ಡ ಅಥವಾ ಮುಗ್ಧ ಆದರೆ ಎದೆಗುಂದದ ಸಾಹಸಿ ನಾಯಕ ಆಕೆಗೆ ಸಾಥ್ ಕೊಡುವನು, ಭಂಡ ಧೈರ್ಯದಿಂದ ಅವರು ಅಪರಾಧಕ್ಕೆ ಕೈಹಚ್ಚುವರು..ಆದರೆ ಎಲ್ಲಾ ಕತೆಗಳ ಸಂದೇಶವೂ “ಕ್ರೈಮ್ ನೆವರ್ ಪೇಸ್” ಎಂಬುದೇ..ಅಂದರೆ ಅಪರಾಧ ಬಯಲಾಗೇ ಆಗುತ್ತದೆ, ಯಶಸ್ಸಾಗದು ಎಂಬುದು. ಇದನ್ನು ನಾವು ನಮ್ಮ ಕರ್ಮ ಸಿದ್ಧಾಂತವೋ, ಇಲ್ಲವೇ ಸತ್ಯ ಮೇವ ಜಯತೇ ಗೋ ತಳುಕು ಹಾಕಬಹುದು. ಎಷ್ಟು ಚಾಲಾಕಿ ಅಪರಾಧಿಯಾದರೂ ಕಾನೂನಿನ ಕೈಗೆ ಹೇಗೆ ಚಿಕ್ಕ ತಪ್ಪುಗಳಿಂದ ಪ್ರಮಾದವಾಗಿ ಸಿಕ್ಕಿ ಬೀಳುತ್ತಾರೆ ಎಂಬುದು ಅವರ ಮುಖ್ಯ ಸಂದೇಶ.. ಅದಕ್ಕೆ ವ್ಯತಿರಿಕ್ತವಾಗಿ ಅಪರಾಧಿ ಹೇಗೋ ತಪ್ಪಿಸಿಕೊಳ್ಳುವಂತೆಯೂ, ಇಲ್ಲವೇ ಹೇಗೋ ಒಂದು ತರಹ ಪರಿಹಾರವಾದಂತೆಯೋ ಕೆಲವಲ್ಲಿ ಮಾತ್ರ ಉಂಟು…ಆದರೆ ಕೊನೆಯವರೆಗೂ ಅದನ್ನು ಖಂಡಿತವಾಗಿ ಹೀಗೇ ಎಂದು ಹೇಳಲಾಗದಾಗಿರುತ್ತಿತ್ತು. ಸರಳ ಆದರೆ ಚುರುಕಾದ ಕಾಲಕ್ಕೆ ತಕ್ಕ ಸಂಭಾಷಣೆ, ಜತೆಗೆ ನಾಯಕ ಪಾತ್ರಗಳ ರೊಮಾನ್ಸ್, ಅನೈತಿಕ ಸಂಬಂಧದ ಜಾಲದಲ್ಲಿ ಸಿಲುಕುವುದರ ( ಅಶ್ಲೀಲವಲ್ಲದ) ವರ್ಣನೆ, ಹಲವು ಕೋನಗಳಿಂದ ಕತೆಯ ಜಾಲವನ್ನು ಬಿಡಿಸುವುದು, , ಇಲ್ಲವೇ ಸ್ವಗತದಲ್ಲಿ (ಫ಼ಸ್ಟ್ ಪರ್ಸನ್) ನಲ್ಲಿ ಕತೆ ಹೇಳುವುದು ಹೀಗೆ… ಒಂದೊಂದು ಕೃತಿಯೂ ತನ್ನದೇ ಆದ ವೈವಿಧ್ಯತೆಯಿಂದ ಕೂಡಿರುತ್ತಿತ್ತು..
ಅವರ ಸರಿಸುಮಾರು ಕತೆಗಳಲ್ಲಿ ಸುವ್ಯವಸ್ಥಿತ ಬ್ಯಾಂಕ್ ದರೋಡೆ ಯೋಜನೆಗಳು, ಬ್ಲ್ಯಾಕ್ ಮೈಲ್, ಅಮೂಲ್ಯ ಚಿತ್ರ ಇಲ್ಲವೇ ಮುತ್ತು ರತ್ನ ಕಳುವು, ವಂಚನೆ, ಕೊಲೆ ಮತ್ತು ಕುಟುಂಬ ಪಿತೂರಿ ಅಲ್ಲದೇ ಅಮೆರಿಕ ಸ್ಟೀಟ್ ಮಾಫಿಯಾದ ರಾಜಕೀಯಗಳಲ್ಲಿ ಅಂತಃ ಕಲಹ ಇವುಗಳ ರೋಚಕ ವಿವರಣೆ ಇರುತ್ತಿತ್ತು. ಸಸ್ಪೆನ್ಸ್ ಮತ್ತು ಸಾಹಸಗಳನ್ನು ಮಿಳಿತಗೊಳಿಸಿ ಓದುಗರನ್ನು ಉಸಿರು ಬಿಗಿ ಹಿಡಿಯುವಂತೆ ಕೊನೆಪುಟದವರೆಗೂ ಕರೆದೊಯ್ಯಬಲ್ಲರಾಗಿದ್ದರು. ಆಶ್ಚರ್ಯವೆಂದರೆ ಇವರ ಕತೆಗಳು ಸಾಮಾನ್ಯವಾಗಿ ಅಮೆರಿಕದ ಆಗಿನ ಕಾಲ್ಪನಿಕ ನಗರವೊಂದರಲ್ಲಿ ನೆಡೆಯುವಂತಿದ್ದರೂ, ಚೇಸ್ ಸ್ವತಃ ಅಮೆರಿಕನ್ ನೆಲವನ್ನು ತುಳಿಯಲೆ ಇಲ್ಲ, ಕೇವಲ ನಕ್ಷೆ, ಭೂಪಟ ಮತ್ತು ಇತರ ಅಮೆರಿಕ ಕ್ರೈಮ್ ಕತೆಗಾರರ ವಿವರಣೆಯಿಂದ ನಿರ್ದೇಶಿತರಾಗಿ ಬರೆದದ್ದಂತೆ..
ಆದರೆ ಅವರ ಫ್ಲಾರಿಡಾದ ಮಿಯಾಮಿ, ಪ್ಯಾರಡೈಸ್ ಸಿಟಿ, ನ್ಯೂಯಾರ್ಕ್ ಇತ್ಯಾದಿ ಸ್ಥಳಗಳ ಕರಾರುವಾಕ್ಕು ಎನಿಸುವ ವಿವರಣೆ ಮತ್ತು ಅಲ್ಲಿನ ಸಾಮಾಜಿಕ ನೆಡವಳಿಕೆಯನ್ನು ಯಥಾವತ್ತಾಗಿ ರೂಪಿಸಬಲ್ಲ ಶಕ್ತಿ ಅನನ್ಯ.
ಅವರ ಹಲವು ಕಾದಂಬರಿಗಳನ್ನು ಚಿತ್ರೀಕರಿಸಲಾಗಿದೆ, ಆದರೆ ಹಲವೆಡೆ ಅವರಿಗೆ ಸಲ್ಲಬೇಕಾದ ಹೆಸರೂ ಗೌರವವೂ ಸಲ್ಲಲಿಲ್ಲ…ಹಿಂದಿ ಚಿತ್ರ “ಜಾನಿ ಗದ್ದಾರ್” ಕೂಡ ಒಂದು ಚೇಸ್ ಕತೆಯ ನಕಲು ಎನ್ನುತ್ತಾರೆ (ಕತೆ ಅದೇ ಧಾಟಿಯಲ್ಲಿದೆ).
ಚೇಸ್ ಬರೆದ ಮೊದಲ ಕತೆ ‘ನೋ ಆರ್ಕಿಡ್ಸ್ ಫಾರ್ ಮಿಸ್ ಬ್ಲಾಂಡಿಶ್ ’ ಎಂಬ ಮಾಫಿಯಾ ಆಂತರಿಕ ಕಲಹ, ಕ್ರೌರ್ಯ ಪ್ರಧಾನ ಕಾದಂಬರಿ ಅತ್ಯಂತ ಜನಪ್ರಿಯವಾಗಿ ಕಲ್ಟ್ ಸ್ಥಾನ (ಆರಾಧಿಸಲರ್ಹ)ಪಡೆಯಿತು.
ನನ್ನ ಪ್ರಕಾರ ಅವರ ಶ್ರೇಷ್ಟ, ಮಿಸ್ ಮಾಡಿಕೊಳ್ಳಬಾರದ ಫ಼ೇವರಿಟ್ ಕಾದಂಬರಿಗಳೆಂದರೆ:
ದೇರ್ಸ್ ಅ ಹಿಪ್ಪಿ ಆನ ದ ಹೈವೇ, ಎನ್ ಇಯರ್ ಟು ದ ಗ್ರೌಂಡ್ (ಕ್ರೈಮ್ ಪ್ರಧಾನ)
ಲೇ ಹರ್ ಅಮಾಂಗ್ ದ ಲಿಲ್ಲೀಸ್, ಫ಼ಿಗರ್ ಇಟ್ ಔಟ್ ಫಾರ್ ಯುವರ್ ಸೆಲ್ಫ್, ಎ ಕಾಫಿನ್ ಫ಼್ರಮ್ ಹಾಂಕಾಂಗ್, ದ ಗಿಲ್ಟಿ ಆರ್ ಅಫ಼್ರೇಡ್ ( ಪತ್ತೇದಾರನ ಶೋಧನೆ)
ಹ್ಯಾವ್ ದಿಸ್ ಒನ್ ಆನ್ ಮಿ (ಇದು ಸ್ಪೈ ಥ್ರಿಲ್ಲರ್)
ಮಿಶನ್ ಟು ವೆನೀಸ್ (ಸಾಹಸ ಪ್ರಧಾನ)
ವೆಲ್ ನೌ ಮೈ ಪ್ರೆಟಿ, ಮೈ ಲಾಫ್ ಕಮ್ಸ್ ಲಾಸ್ಟ್ (ಬ್ಯಾಂಕ್/ ಹಣ ಲೂಟಿ) ಇತ್ಯಾದಿ.
ಕನ್ನಡದಲ್ಲಿ ಎಂ ವಿ ನಾಗರಾಜರಾಯರು ಸುಮಾರು ೨೦ ಚೇಸ್ ಕಾದಂಬರಿಗಳನ್ನು ಅನುವಾದ ಮಾಡಿದರು, ಅವು ಸಪ್ನಾ ಬುಕ್ ಸ್ಟೋರ್, ಡೈಲಿ ಹಂಟ್ ಕನ್ನಡ ಆಪ್ ನಲ್ಲಿ ಈಗಲೂ ದೊರೆಯುತ್ತದೆ.
ನನ್ನ ಪ್ರಕಾರ ಅವರ ಅನುವಾದ ಸರಿಯಾಗೇ ಇದ್ದರೂ, ಆ ಕಾಲದ ಅಮೆರಿಕನ್ ಎಥೋಸ್ ( ಸಾಮಾಜಿಕ ಮೌಲ್ಯ ವರ್ಣನೆ) ಗೆ ನೀವು ಇಂಗ್ಲೀಶ್ ಮೂಲ ಕಾದಂಬರಿಗಳನ್ನೆ ಓದಿದರೆ ಉತ್ತಮ. ಇಲ್ಲವೇ “ಇದೇನು ಪಿಚ್ಚೆನಿಸಿತು” ಅನ್ನಬಹುದು. (ಅದು ಅನುವಾದಕರ ತಪ್ಪಲ್ಲ, ಒರಿಜಿನಲ್ ಸಂಧರ್ಭ, ಕಾಲದ ಗುಣ ಲಕ್ಷಣವೆ ಹಾಗೆ..ಅದು ಸುಮಾರು ೫೦ ವರ್ಷದ ಹಿಂದಿನ ವಿದೇಶಿ ಕಾಲಮಾನದ ಕತೆಗಳು).
ಈಗಿನ ಓದುಗರಿಗೆ ಹೆಣ್ಣನ್ನು ಹೀಗೆ ಸ್ಟಿರಿಯೋಟೈಪ್ ( ಏಕ ಪ್ರಕಾರ) ಮಾಡಬಹುದೆ ಅನ್ನಿಸಬಹುದು. ಆದರೆ ಅದು ಚೇಸ್ ಬರೆದ ಕಥಾಲೋಕದ ಚರ್ಚೆಯಾದೀತು..
ಚೇಸ್ ಕಾದಂಬರಿಗಳು ಈಗಲೂ ಜನಪ್ರಿಯ ಅಂಗಡಿಗಳಲ್ಲಿ, ಅಮೆಜ಼ಾನ್, ಫ಼್ಲಿಪ್ ಕಾರ್ಟ್, ಸಪ್ನಾ ಮುಂತಾದೆಡೆ ದೊರಕುವುವು.
goodreads.com, wikipedia.org – ಇಂತಾ ಜಾಲತಾಣಗಳಲ್ಲಿ ಚೇಸ್ ಬಗ್ಗೆ ವಿವರವಾಗಿ ಒದಿ ಅವರ ಕಾದಂಬರಿ ವಿಮರ್ಶೆಗಳನ್ನೂ ಕಾಣಬಹುದು.

ಕೊನೆಯ ಸಾಲು- ಒಮ್ಮೆ ಓದಿ, ಅವರ ಫ್ಯಾನ್ ಆಗಿಬಿಡುವಿರಿ!

https://en.wikipedia.org/wiki/James_Hadley_Chase
https://www.goodreads.com/aut…/show/63913.James_Hadley_Chase

 

Share this!

Leave a Reply

Your email address will not be published. Required fields are marked *