Maclean-Bagley novels….Intro Kannada

Home / Blog / Maclean-Bagley novels….Intro Kannada

ವಾರಕ್ಕೆರಡು ಆಂಗ್ಲ ಕತೆಗಾರರ ಪರಿಚಯ ಲೇಖನಗಳನ್ನು ಬರೆಯೋಣ ಎಂತಿದ್ದೇನೆ..ಈ ವಾರದ ಎರಡನೇ ಲೇಖನ ಇಲ್ಲಿದೆ:
ಆಂಗ್ಲ ಕಾದಂಬರಿಕಾರ ಪರಿಚಯಮಾಲಿಕೆ-೨
————————————————–
೬೦-೭೦ ದಶಕದ ಇಬ್ಬರು ರೋಮಾಂಚಕ ಸಾಹಸ ಕತೆಗಾರರು:
ಆ್ಯಲಿಸ್ಟರ್ ಮ್ಯಾಕ್ಲೀನ್ ಮತ್ತು ಡೆಸ್ಮಂಡ್ ಬ್ಯಾಗ್ಲಿ:
———————————————-

I. ಆ್ಯಲಿಸ್ಟರ್ ಮ್ಯಾಕ್ಲೀನ್ (೧೯೨೨-೧೯೮೭):

ಇವರು ಒಬ್ಬ ಸ್ಕಾಟ್ಲೆಂಡಿನಲ್ಲಿ ಜನಿಸಿದ ಇಂಗ್ಲೀಷ್ ಕತೆಗಾರ. ವಿಶ್ವದಲ್ಲಿ ಇಂದಿಗೂ ಮೇಲ್ಪಂಕ್ತಿಯಲ್ಲಿರುವಂತ ಸಾಹಸಮಯ ಕಾದಂಬರಿಗಳ ಕರ್ತೃ.
ರಾಯಲ್ ನೇವಿಯಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ( ಒಬ್ಬ ಪಾದ್ರಿಯ ಮಗ ), ಆಗ ನೆಡೆಯುತ್ತಿದ್ದ ವಿಶ್ವಸಮರಗಳಲ್ಲಿ ಭಾಗವಹಿಸಿ ಪ್ರತ್ಯಕ್ಷದರ್ಶಿಯಾಗಿದ್ದವರು. ಅದರಿಂದ ಬಿದುಗಡೆಯಾಗಿ ಮತ್ತೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಇಂಗ್ಲೀಷ್ ಪದವಿ ಪಡೆದು ಶಾಲಾ ಅದ್ಯಾಪಕನಾಗಿದ್ದರೂ ತಮ್ಮ ನೌಕಾಪಡೆ ವೃತ್ತಿ ಜೀವನದ ನೆನಪು ಮತ್ತು ಅನುಭವವನ್ನು ಭಟ್ಟಿ ಇಳಿಸಿ ಯುದ್ಧ ಸಂಬಂಧಿತ ಕತೆಗಳನ್ನು ಬರೆಯಲು ಆರಂಭಿಸಿದರು. ಒಮ್ಮೊಮ್ಮೆ ಅಯಾನ್ ಸ್ಟುವರ್ಟ್ ಎಂಬ ಕಾವ್ಯನಾಮದಲ್ಲೂ ಬರೆದರು.
ಅವರ ಮೊದಲ ಕಾದಂಬರಿ ಸಹಜವಾಗಿಯೆ ಒಂದು ಯುದ್ಧ ನೌಕೆ- “ಎಚ್ ಎಂ ಎಸ್ ಯೂಲಿಸೆಸ್” ಎಂಬುದರ ಸಮರ ಪ್ರಧಾನ ಸಾಹಸ ಕತೆ , ರೋಚಕ ಬರವಣಿಗೆ, ಹಿಂದೆಂದೂ ಕಾಣಸಿಗದ ಸೇನೆ ಮತ್ತು ವಿಶ್ವ ಯುದ್ದ ನೀತಿಯ ವಿವರಣೆಯಿಂದ ಓದುಗರ ಮನಗೆದ್ದು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಯಿತು. ಇಂದಿಗೂ ಅದೊಂದು ನೇವಿ ಬಗ್ಗೆಯ ನೈಜ ವ್ಯಾಖ್ಯಾನ ಎಂದೇ ಹೇಳುತ್ತಾರೆ.
ಮ್ಯಾಕ್ಲೀನ್ ಅಲ್ಲಿಂದ ಹಿಂತಿರುಗಿ ನೋಡಲೆ ಇಲ್ಲ. ಒಂದರ ನಂತರ ಒಂದು- ಸಾಹಸಮಯ ಯುದ್ಧ ಪ್ರಧಾನ, ಅಂತರರಾಷ್ಟ್ರೀಯ ಗೂಡಚರ್ಯೆ, ಡ್ರಗ್ ಮಾಫ಼ಿಯಾ, ಚಿನ್ನದ ಕಳ್ಳಸಾಗಣಿಕೆ ಇತ್ಯಾದಿ ವಿವಿಧ ವಿಷಯಗಳ ಮೇಲೆ ವರ್ಷಕ್ಕೆ ಒಂದೆರೆಡರಂತೆ ಕಾದಂಬರಿಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಾ ಹೋಯಿತು. ಮ್ಯಾಕ್ಲೀನ್ ಕಾದಂಬರಿಗಳೆಂದರೆ ಅಂತರರಾಷ್ಟ್ರೀಯ ಓದುಗರ ಮೊತ್ತಮೊದಲ ಫ಼ೇವರಿಟ್ ಆಯ್ಕೆ ಆಗಿ ಹೆಸರುವಾಸಿಯಾದರು.
ಅವರ ಹಲವು ಕಾದಂಬರಿಗಳು ೭೦-೮೦ ರ ದಶಕಗಳಲ್ಲಿ ಯಶಸ್ವೀ ಹಾಲಿವುಡ್ ಚಿತ್ರಗಳಾಗಿ ನೋಡುಗರ ಮನಗೆದ್ದು ಅವರ ಪುಸ್ತಕಗಳು ಭರಾಟೆಯಿಂದ ಮಾರಲ್ಪಟ್ಟವು.
ಮ್ಯಾಕ್ಲೀನ್ ಬರೆದ ಕಾದಂಬರಿಗಳಲ್ಲಿ ಗನ್ಸ್ ಆಫ್ ನ್ಯಾವರೋನ್, ವೇರ್ ಈಗಲ್ಸ್ ಡೇರ್, ಐಸ್ ಸ್ಟೇಷನ್ ಜ಼ೀಬ್ರಾ, ಪಪೆಟ್ ಆನ್ ಎ ಚೈನ್, ಬ್ರೇಕ್ ಹಾರ್ಟ್ ಪಾಸ್, ದ ಸೇಟನ್ ಬಗ್ ಮುಂತಾದವು ಯಶಸ್ವೀ ಚಿತ್ರಗಳ ಸಾಲಿಗೆ ಸೇರಿದವು. ನನಗೇನೋ ಅವರ ಚಿತ್ರಗಳಲ್ಲಿ ಆ ಕಾದಂಬರಿಯಲ್ಲಿ ಕಾಣುವ ಬರಹದ ಗಮ್ಮತ್ತು, ಸ್ವಾರಸ್ಯ, ಲಘು ಹಾಸ್ಯ, ರೋಚಕ ಸಂಭಾಷಣೆ ಎಲ್ಲವೂ ಕಾಣದಾದವೊ ಎಂದನಿಸುತ್ತದೆ

ಇವರ ಕಾದಂಬರಿಗಳಲ್ಲಿ ಸಾಹಸ, ರಹಸ್ಯ, ಪತ್ತೇದಾರಿ ಎಲ್ಲವು ಮೇಳೈಸಿರುತ್ತಿದ್ದವು; ನಾಯಕನ ಒಣಹಾಸ್ಯ, ನಿಗೂಡ ವ್ಯಕ್ತಿತ್ವ ಮುಖ್ಯವಾಗಿದ್ದು, ನಾಯಕ ಪಾತ್ರಗಳ ರೊಮಾನ್ಸಿಗೆ ಕೊನೆಯ ಸ್ಥಾನವಿರುತಿತ್ತು. ಅವರು ಸ್ವತಃ ಬರೆದ ೨೫ ಕಾದಂಬರಿಗಳಲ್ಲಿ ಹೆಚ್ಚಿನವು ನಾಯಕನ ಆತ್ಮ ಚರಿತ್ರೆ( ಸ್ವಗತ ಶೈಲಿ, ’ನಾನು ’ ಎಂಬಂತೆ) ಶೈಲಿಯಲ್ಲಿವೆ. ಅವರ ಕತೆಯ ಶೀರ್ಷಿಕೆಗಳೇ ಕುತೂಹಲಕಾರಿಯಾಗಿ ಮೈ ನವಿರೇಳಿಸುವಂತಿರುತ್ತಿದ್ದವು.

ನನ್ನ ಫೇವರಿಟ್ 10 ಮ್ಯಾಕ್ಲೀನ್ ಪುಸ್ತಕಗಳೆಂದರೆ ( ಚಿಕ್ಕ ವಿವರಣೆ) ( ಸ್ಟಾರ್ ರೇಟಿಂಗ್ ಜತೆ):-

೧. ದ ಲಾಸ್ಟ್ ಫ್ರಾಂಟಿಯರ್ ( ಗಡಿಯಲ್ಲಿ ಮಾನವ ಸಾಗಣಿಕೆ ರಹಸ್ಯ) ( 4/5)
೨. ಗೋಲ್ಡನ್ ರೆನ್ದೆವೋ ( ಸಾಗರಮಧ್ಯೆ ಚಿನ್ನದ ಕಳ್ಳತನ) ( 5/5)
೩. ಪಪೆಟ್ ಆನ್ ಎ ಚೈನ್ ( ಡ್ರಗ್ ಮಾಫ಼ಿಯಾ ಜಾಲ ಪತ್ತೆ) (4/5)
೪. ದ ಡಾರ್ಕ್ ಕ್ರುಸೇಡರ್ (ರಾಕೆಟ್ ವಿಜ್ಞಾನಿಗಳ ಕೂಟದ ರಹಸ್ಯ) ( 3.5/5)
೫. ನೈಟ್ ವಿಥೌಟ್ ಎಂಡ್ ( ಆರ್ಕ್ಟಿಕ್ ಚಳಿಯಲ್ಲಿ ಸಿಕ್ಕಿಕೊಂಡ ಅಫಘಾತವಾದ ವಿಮಾನ ಪ್ರಯಾಣಿಕರ ರಹಸ್ಯ) (4.5/5)
೬. ವೆನ್ ಎಯ್ಟ್ ಬೆಲ್ಸ್ ಟೋಲ್ ( ಸಾಗರ ಮಧ್ಯೆ ನಿಗೂಢ ಜಾಲದ ಪತ್ತೇದಾರಿ) (4.5/5)
೭. ದ ಸೇಟನ್ ಬಗ್ ( ವೈರಸ್ ಕಳುವು ಮೂಲಕ ರಣತಂತ್ರ) (4/5)
೮. ಐಸ್ ಸ್ಟೇಷನ್ ಜ಼ೀಬ್ರಾ (ಆರ್ಕ್ಟಿಕ್ ನಲ್ಲಿ ಯುದ್ಧ ಕಾಲದ ನಿಗೂಢ ರಹಸ್ಯ) (4.5/5)
೯ . ದ ವೇ ಟು ಡಸ್ಟೀ ಡೆತ್ ( ಕಾರ್ ರೇಸಿಂಗ್ ಸಂಬಂಧಿತ ರಹಸ್ಯ ಜಾಲ)(3.5/5)
೧೦. ದ ಬ್ರೇಕ್ ಹಾರ್ಟ್ ಪಾಸ್ ( ಒಂದು ರೈಲಿನಲ್ಲಿ ಕ್ರೈಮ್ ಜಾಲ ಪತ್ತೆ) (4/5)

ಈಗ ಹೆಚ್ಚಿನ ಸಂಖ್ಯೆಯಲ್ಲಿ ಇವರ ಕಾದಂಬರಿಗಳನ್ನು ಓದುವವರಿಲ್ಲ ಎಂದು ನನ್ನ ಕೊರಗು. ಆ ಶೈಲಿ ಮತ್ತು ವಿವರಣೆ ಹಳೇಕಾಲದ್ದು (out dated) ಎನಿಸಿರಬಹುದು.
ಇವರ ಕಾದಂಬರಿಗಳ್ಯಾವುದೂ ಕನ್ನಡಕ್ಕೆ ನೇರವಾಗಿ ಅನುವಾದವಾಗಿರುವುದು ನನಗೆ ತಿಳಿದಿಲ್ಲ. ( ನಾನೇ ಮಾಡಬೇಕಾಗುತ್ತದೇನೋ?)
ಹೆಚ್ಚಿನ ವಿವರಗಳಿಗೆ:
https://en.wikipedia.org/wiki/Alistair_MacLean

ಮ್ಯಾಕ್ಲೀನ್ ಪುಸ್ತಕಗಳು ಅಂಗಡಿಗಳಿಂದ ಮಾಯವಾಗುವುದೇ ಇಲ್ಲವೆಂಬ ಪ್ರತೀತಿಯಿದೆ. ಸಪ್ನಾ/ ಅಮೆಜ಼ಾನ್/ ಫ಼್ಲಿಪ್ ಕಾರ್ಟ್ ನಲ್ಲಿ ಲಭ್ಯ
——-

II. ಡೆಸ್ಮ್ಂಡ್ ಬ್ಯಾಗ್ಲಿ: (೧೯೨೩-೧೯೮೩):

ಇವರು ಇಂಗ್ಲೆಂಡಿನಲ್ಲಿ ಜನಿಸಿ, ಮೊದಲು ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮತ್ತು ವಿಮಾನ ಕಾರ್ಖಾನೆಯಲ್ಲಿಯೂ ಕೆಲಸ ಮಾಡಿಕೊಂಡಿದ್ದು , ತಮಗಿದ್ದ ಸ್ವಲ್ಪ ತೊದಲು ಊನವನ್ನೂ ಗೆಲ್ಲುತ್ತಾ ಆಫ್ರಿಕಾ ಮುಂತಾದ ಕಡೆ ಸುತ್ತಿ ತನ್ನ ಬರಹಕ್ಕೆ ಸ್ಪೂರ್ತಿ ತಂದುಕೊಂಡರು. ಹಲವೆಡೆ ಪ್ರವಾಸ ಮಾಡಿ ಸ್ವಂತ ಅನುಭವ ಪಡೆದು ಬರಹಕ್ಕಿಳಿದರು.

ಇವರ ಕಾದಂಬರಿಗಳಲ್ಲಿಯೂ ಯಾವುದೋ ವಿದೇಶದಲ್ಲಿ ನೆಡೆಯುವ ನಿಧಿ ನಿಕ್ಷೇಪದ ಸಂಚು, ಅದರಲ್ಲಿ ನಾಯಕ ತಿಳಿದೋ ತಿಳಿಯದೆಯೋ ಭಾಗಿಯಾಗುವುದು ಅಲ್ಲದೇ ಕೆಲವು ಕಾದಂಬರಿಗಳಲ್ಲಿ ಗೂಢಚಾರಿಗಳ ಕಾರ್ಯಾಚರಣೆ, ಇಲ್ಲವೇ ಜೈಲಿಂದ ಓಡಿಬಂದು ಯಾವುದೋ ನಿಗೂಢ ಪತ್ತೇದಾರಿ ಕಾರ್ಯ ಮಾಡುವುದು ಇತ್ಯಾದಿ ಸಾಮಾನ್ಯ ಕಥಾವಸ್ತುವಾಗಿರುತಿತ್ತು. ಪ್ರಧಾನ ಪಾತ್ರಧಾರಿ ಯಾವಾಗಲೂ ದಿಟ್ಟ ಸಾಹಸಿ ನಾಯಕನಾಗಿದ್ದು, ಕೆಲವೊಮ್ಮೆ ಮಾತ್ರ ನಾಯಕಿ ಅವನ ಚಟುವಟಿಕೆಗಳಲ್ಲಿ ಭಾವಹಿಸುವವಳಾಗಿದ್ದಳು. ಇವರ ಮೊದಲ ಕಾದಂಬರಿ ೧೯೬೩ ಯಲ್ಲಿ ರಚಿಸಿದ- “ದ ಗೋಲ್ಡನ್ ಕೀಲ್” ಜನಪ್ರಿಯ ಹಿಟ್ ಆಗಿ ಇವರು ನಂತರ ೧೬ ಅಂತಾ ಕಾದಂಬರಿಗಳನ್ನು ಆಂಗ್ಲ ಸಾಹಿತ್ಯ ಲೋಕಕ್ಕೆ ಕೊಟ್ಟರು. ಸಮಕಾಲೀನರಾದ ಲೇಖಕ ಆಲಿಸ್ಟೇರ್ ಮ್ಯಾಕ್ಲೀನ್ ಜತೆಗೆ ಪೈಪೋಟಿಗಿಳಿದಿದ್ದಾರೋ ಎಂದು ಓದುಗರು ಭಾವಿಸುವಂತಾಯಿತು. ಹೇಗೂ ಜನಪ್ರಿಯತೆ ಹೆಚ್ಚುತ್ತಾ ಹೋಯಿತು.
ಇವರ ರನ್ನಿಂಗ್ ಬ್ಲೈಂಡ್, ವಿವೆರೋ ಲೆಟರ್, ಫ಼್ರೀಡಮ್ ಟ್ರ್ಯಾಪ್, ಲ್ಯಾಂಡ್ ಸ್ಲೈಡ್ ಇವು ಇಂಗ್ಲೀಷ್ ಚಿತ್ರರಂಗದಲ್ಲಿ ಪ್ರದರ್ಶನ ಕಂಡವು…
ಆದರೆ ಕಾದಂಬರಿಗಳಲ್ಲಿದ್ದ ಉಸಿರು ಬಿಗಿ ಹಿಡಿಸುವ ವೇಗದ ಘಟನೆಗಳು, ಸ್ವಾರಸ್ಯ, ರಹಸ್ಯ ಶೋಧ ಚಿತ್ರರಂಗದಲ್ಲಿ ಯಾಕೋ ಸಂಪೂರ್ಣವಾಗಿ ಅನುವಾದಿತವಾಗಲಿಲ್ಲ. ದೊಡ್ಡ ಪ್ರಮಾಣದಲ್ಲಿ ಯಶಸ್ಸು ಪಡೆದದ್ದು -ಪಾಲ್ ನ್ಯೂಮನ್ ನಟಿಸಿದ “ಮ್ಯಾಕಿನ್ಟಾಶ್ ಮ್ಯಾನ್” (1973) ( ಫ಼್ರೀಡಮ್ ಟ್ರ್ಯಾಪ್ ಕತೆ ಆಧರಿತ) ಚಿತ್ರ.

ಇವರ ಬರಹದಲ್ಲಿ ನನ್ನ ಪ್ರಿಯ ಕಾದಂಬರಿಗಳು : (ರೇಟಿಂಗ್ ಸಹಿತ)

ಟೈಟ್ ರೋಪ್ ಮೆನ್ ( ಒಬ್ಬನಂತೇ ಮತ್ತೊಬ್ಬನ್ನನ್ನು ನಕಲು ತಯಾರು ಮಾಡಿದವರಾರು ಎಂಬ ರಹಸ್ಯ) (4.5/5)
ಫ಼್ರೀಡಮ್ ಟ್ರ್ಯಾಪ್( ಜೈಲಿನಿಂದ ತಪ್ಪಿಸಿಕೊಂಡ ನಾಯಕನ ಗುಟ್ಟೇನು?) (4.5/5)
ರನ್ನಿಂಗ್ ಬ್ಲೈಂಡ್ ( ಐಸ್ ಲ್ಯಾಂಡಿನಲ್ಲಿ ಗೂಢಚಾರಿ ನಾಯಕ ಸಂಚಿನಲ್ಲಿ ಸಿಲುಕಿದ ಕತೆ) ( 4.5/5)
ಸ್ನೋ ಟೈಗರ್ (ಬಿರುಗಾಳಿಯಲ್ಲಿ ವಿನಾಶ, ಅದರಲ್ಲೊಂದು ಶೋಧ )(4/5)
ವಯಾಟ್ಸ್ ಹರಿಕೇನ್ (ಸುಂಟರಗಾಳಿ ಸಂಬಂಧಿತ ಸಾಹಸ) (4/5)
ಹೈ ಸಿಟಡೆಲ್ (ಸಂಕಷ್ಟದಲ್ಲಿ ಸಿಲುಕಿದ ಪ್ರಯಾಣಿಕರ ಸಾಹಸ ಪ್ರಧಾನ ವಸ್ತು)(4/5)
ದ ಸ್ಪಾಯಿಲರ್ಸ್ ( ಡ್ರಗ್ ಮಾಫ಼ಿಯಾದವರನ್ನು ಸದೆ ಬಡಿಯುವುದು ಅಷ್ಟು ಸುಲಭವೆ?)(4/5)
ಹೆಚ್ಚಿನ ವಿವರಗಳಿಗೆ ಓದಿ:
https://www.goodreads.com/author/show/57672.Desmond_Bagley
ಇವರ ಪುಸ್ತಕಗಳ್ಯಾವುದೂ ಕನ್ನಡಕ್ಕೆ ಅನುವಾಗಿಲ್ಲವೆನಿಸುತ್ತದೆ. ಇಂಗ್ಲೀಷ್ ಪುಸ್ತಕ ಪ್ರತಿಗಳು ಈಗಲೂ ಸಪ್ನಾ/ ಫ಼್ಲಿಪ್ ಕಾರ್ಟ್/ ಅಮೆಜ಼ಾನ್ ನಲ್ಲಿ ಸಿಗುತ್ತವೆ.

Share this!

One Comment

Leave a Reply

Your email address will not be published. Required fields are marked *