Perry Mason can solve any case!

Home / English books / Perry Mason can solve any case!

ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೩:
““““““““““““““““““““““““
(ಇದು ಸಹಾ ಜನಪ್ರಿಯ ಆಂಗ್ಲ ಕಾದಂಬರಿಗಳ ಬಗ್ಗೆ ಆ ವರ್ಗದ ಓದುಗರಿಗಾಗಿ 🙂)
ಪೆರ್ರಿ ಮೇಸನ್ ಎಂಬ ಸೋಲಿಲ್ಲದ ವಕೀಲ:
~~~~~~~~~~~~~~~~~~~~~~~~~~
ಇಂಗ್ಲೀಷಿನಲ್ಲಿ ಲೇಖಕ ಅರ್ಲ್ ಸ್ಟ್ಯಾನ್ಲಿ ಗಾರ್ಡನರ್ (೧೮೮೯-೧೯೭೦) ಅವರ ಹೆಸರಿಗಿಂತಾ ಅವರು ಸೃಷ್ಟಿಸಿದ ಅದ್ವಿತೀಯ ಯಶಸ್ಸು ಪಡೆವ ಕ್ರಿಮಿನಲ್ ವಕೀಲ “ಪೆರ್ರಿ ಮೇಸನ್” ಪಾತ್ರವೇ ಹೆಚ್ಚು ಜನಜನಿತ. ಸಾಮಾನ್ಯವಾಗಿ ವಕೀಲ ವೃತ್ತಿಯ ಬೈಬಲ್ ಎನಿಸಿಕೊಳ್ಳುವಂತಾ ಈ ಸರಣಿಯಲ್ಲಿ ಎಲ್ಲಾ ಬಗೆಯ ಕೊಲೆ/ ವಂಚನೆಗೆ ಸಂಬಂಧಪಟ್ಟ ಕಾನೂನಿ ಸಮಸ್ಯೆಗಳನ್ನು ಗಾರ್ಡನರ್ ಅತಿ ಯಶಸ್ವಿಯಾಗಿ ಸವಿವರವಾಗಿ ಬಿಂಬಿಸುತ್ತಿದ್ದರು. ತಮ್ಮ ಪ್ರತಿ ಕೇಸಿನ ಕಾದಂಬರಿಯಲ್ಲಿ ತಮ್ಮ ಕೇಸಿನ ತಿರುಳನ್ನು ರೋಮಾಂಚಕ ರೀತಿಯಲ್ಲಿ ಕೊನೆ ಪುಟದವರೆಗೂ ವಾದ-ಪ್ರತಿವಾದ ಮತ್ತು ಶೋಧನೆ ಮೂಲಕ ಉಗುರು ಕಚ್ಚುವಷ್ಟು ಕಾತರ, ಆಸಕ್ತಿ ಮೂಡಿಸುತ್ತಾ ಹೊರತರುತ್ತಾರೆ.
ಆತನ ಸಹಾಯಕಿ ಡೆಲ್ಲಾ ಸ್ಟ್ರೀಟ್ ಎಂಬ ಸುಂದರ ಕುಶಾಗ್ರಮತಿ ಯುವತಿ ಅವನ ಬೆನ್ನ ಹಿಂದೆ ಸದಾ ಕಾರ್ಯ ಪ್ರವರ್ತಳಾಗಿರುತ್ತಾಳೆ. ಆಕೆಗೂ ವಕೀಲ ಪೆರ್ರಿಗೂ ಹಲವು ಬಾರಿ ಅನುರಾಗವಿತ್ತೆಂದೂ, ಅವರಿಬ್ಬರೂ ಮದುವೆಯಾಗಬಹುದೆಂಬ ಸುಳಿವು ಮಾತ್ರ ಲೇಖಕ ನಮಗೆ ಆಗಾಗ ನೀಡುತ್ತಾರೆ.. ಆದರೆ ಕೊನೆಯವರೆಗೂ ಆಕೆ ಅವನ ಜೀವನದ ಶಾಶ್ವತ ಸಂಗಾತಿ ಮಾತ್ರ.

ಗಾರ್ಡನರ್ ತಮ್ಮ ಚಾಣಾಕ್ಷ ಮೇಧಾವಿ ವಕೀಲನಿಗೆ ಆರಿಸಿಕೊಂಡ ಕಾರ್ಯಕ್ಷೇತ್ರ: ತಾವೆ ಬದುಕಿ ಬಾಳಿದ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್ ನಗರ. ಪೆರ್ರಿ ಮೇಸನ್ನನ ಕಕ್ಷಿದಾರರಾಗಿ ಮುಕ್ಕಾಲುವಾಸಿ ಯಾರಾದರೂ ಅಬಲೆಯೊಬ್ಬಳೇ ಕಾಣಿಸಿಕೊಳ್ಳುವುದು. (ಮೈಡೆನ್ ಇನ್ ಡಿಸ್ಟ್ರೆಸ್( ಅಪಾಯಕ್ಕೆ ಸಿಕ್ಕ ಅಬಲೆ) ಎಂಬ ಕಥಾವಸ್ತು).
ಆಕೆ ಮೇಲ್ನೋಟಕ್ಕೆ ಕೊಲೆಯನ್ನೋ , ಕಳ್ಳತನವನ್ನೋ ನೇರವಾಗಿ ಮಾಡಿದಂತೆ ಕಂಡ ಪೋಲೀಸರು ಆಕೆಯನ್ನು ಬಂಧಿಸಲು ಹುಡುಕುತ್ತಿರುವಾಗ ಆಕೆ ಮೇಸನ್ ಕಚೇರಿಗೆ ಬಂದು ತನ್ನ ಅಳಲು ತೋಡಿಕೊಳ್ಳುವುದು, ಯಾರು “ಬೇಡ , ಇದರಲ್ಲಿ ಸೋಲುತ್ತೀಯೆ” ಎಂದರೂ ನಾಯಕ ಕೇಳದೇ ಆಕೆಯ ವಕಾಲತ್ತು ವಹಿಸಿ, ತನ್ನ ಕಷ್ಟಜೀವಿ ಮಿತ್ರ ಹಾಗೂ ಖಾಸಗಿ ಪತ್ತೇದಾರ ಪಾಲ್ ಡ್ರೇಕ್ ಮೂಲಕ ಅಸಾಧ್ಯ ಸಾಹಸವನ್ನು ತೋರಿ, ಕೊನೆಗೆ ಸರಕಾರಿ ವಕೀಲರಿಗೆ ಚಳ್ಳೆ ಹಣ್ಣು ತಿನ್ನಿಸಿ ಗೆಲ್ಲುವುದು…ಇವೆಲ್ಲಾ ಸಾಮಾನ್ಯವಾಗಿ ಇದ್ದೇ ಇರುತಿತ್ತು. ಪ್ರತಿ ಬಾರಿಯೂ ಆ ಊರಿನ ಪೋಲಿಸ್ ಇನ್ಸ್ಪೆಕ್ಟರ್ ಟ್ರ್ಯಾಗ್ ಅಥವಾ ಸರಕಾರಿ ವಕೀಲ ಹ್ಯಾಮಿಲ್ಟನ್ ಬರ್ಗರ್ ಜತೆಗೆ ಮುಖಾಮುಖಿಯಾಗುವುದು, ಅವರು ಈ ಕೇಸಿನಲ್ಲಾದರೂ ಪೆರ್ರಿ ಮೇಸನ್ನನನ್ನು ಮಣ್ಣು ಮುಕ್ಕಿಸಲೆಂದು ಪಣ ತೊಡುವುದು, ಅವನಿಗೆ ಹಲವು ರೀತ್ಯ ಕಾನೂನಿನಡಿ ಅಡ್ಡಿ ಪಡಿಸುವುದು, ಆದರೂ ಕೊನೆಗೂ ಪೆರ್ರಿಯೇ ಗೆದ್ದು ತನ್ನ ಕಕ್ಷಿದಾರಳು ನಿರಪರಾಧಿ ಎಂದು ರುಜುವಾತು ಮಾಡಿ ಬಿಡುಗಡೆ ಕೊಡಿಸುವುದು… ಇವೆಲ್ಲಾ ಓದುಗ ವರ್ಗ ಬಯಸಿ ನಿರೀಕ್ಷಿಸಿ ಅದಕ್ಕಾಗೇ ಓದುವ ಕೆಲವು ಜನಪ್ರಿಯ ಕುತೂಹಲ ತುಂಬಿದ ಅಂಶಗಳು.

ಇವರ ಮೊದಲ ಕೇಸ್ ಕಾದಂಬರಿ “ವೆಲ್ವೆಟ್ ಕ್ಲಾಸ್” ೧೯೩೩ ರಲ್ಲಿ ಪ್ರಕಟವಾಯಿತು. ಅನಂತರ ಕಾದಂಬರಿಗಳ ಸಾಮ್ರಾಟನಂತೆ ಮೆರೆದ ಇವರು ಸುಮಾರು ೪೦ ವರ್ಷಗಳ ಕಾಲ ಸುಮಾರು ೮೫ ಪೆರ್ರಿ ಮೇಸನ್ ಸಾಹಸದ ಕೇಸುಗಳನ್ನೂ , ಎ ಎ ಫ಼ೇರ್ ಮುಂತಾದ ಅನ್ವರ್ಥ ನಾಮದಲ್ಲಿ ಇನ್ನು ೭೦ ಪತ್ತೇದಾರಿ ಕಾದಂಬರಿ, ನೀಳ್ಗತೆಗಳನ್ನೂ ಬರೆದರು. ಕೆಲವು ಕಾದಂಬರಿಯೇತರ ( ನಾನ್ -ಫಿಕ್ಷನ್) ಪುಸ್ತಕಗಳನ್ನು ಜೀವನದ ಸಂಜೆಯಲ್ಲಿ ಬರೆದರು.

ಅತಿ ಸ್ವಾರಸ್ಯಕರ ಹಾಗೂ ಥಟ್ಟನೆ ಮನಸ್ಸಿಗೆ ಒಪ್ಪುವ ಕಥಾ ಶೀರ್ಷಿಕೆಗಳು ಇವರ ಛಾಪು. ( ಲಕ್ಕಿ ಲೆಗ್ಸ್, ಹೌಲಿಂಗ್ ಡಾಗ್, ಕ್ಯೂರಿಯಸ್ ಬ್ರೈಡ್, ಪರ್ಜೂರ್ಡ್ ಪ್ಯಾರೆಟ್, ಫ಼್ಯಾನ್ ಡ್ಯಾನ್ಸರ್ಸ್ ಹಾರ್ಸ್, ಶಾಪ್ ಲಿಫ಼್ಟರ್ಸ್ ಶೂ-> ಇವು ನನ್ನ ಮೆಚ್ಚಿನ ಕೆಲವು ಪುಸ್ತಕಗಳು, ಹಲವಾರು ನೆನೆಪಿಗೇ ಬರುತ್ತಿಲ್ಲ!). ಇವರ ಪುಸ್ತಕಗಳು ೩೦೦ ಮಿಲಿಯನ್ನಿಗೂ ಮಿಕ್ಕಿ ವಿಶ್ವದಲ್ಲಿ ಮಾರಾಟವಾಗಿದೆ ಎಂದು ಒಂದು ಅಂದಾಜು… ಇನ್ನೂ ಎಲ್ಲಾ ಜನಪ್ರಿಯ ಅಂಗಡಿಗಳಲ್ಲಿ, ಲೈಬ್ರೆರಿಗಳಲ್ಲಿ ಸುಲಭವಾಗಿ ದೊರೆಯುತ್ತವೆ…ಹಲವಾರು ಯುರೋಪಿಯನ್, ಆಫ್ರಿಕನ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿವೆ. ( ಕನ್ನಡದ ಅನುವಾದವನ್ನು ಇದುವರೆಗೂ ನಾನು ಕಂಡಿಲ್ಲ)..
ಹಲವಾರು ವಕೀಲರ ಕಚೇರಿಗಳ ಪುಸ್ತಕ ಕಪಾಟಿನಲ್ಲಿ ಇವರ ಪುಸ್ತಕಗಳು ಇದ್ದೇ ಇರುತ್ತವೆ. ಕನ್ನಡದಲ್ಲಿ ಯಶಸ್ವಿ ಟಿವಿ ಪಾತ್ರಧಾರಿ- ನಿರ್ದೇಶಕ ಟಿ ಎನ್ ಸೀತಾರಾಮ್ ( ಮನ್ವಂತರ, ಮುಕ್ತ ಧಾರಾವಾಹಿ ಖ್ಯಾತಿ) ಕೂಡಾ ವಕೀಲ ಪೆರ್ರಿ ಮೇಸನ್ ಕತೆಗಳಲ್ಲಿ ಬರುವ ಅವರ ತಂತ್ರವನ್ನು ಬಹಳ ಮೆಚ್ಚುವುದಾಗಿ ಹೇಳಿರುವುದನ್ನು ಒಮ್ಮೆ ಓದಿದ್ದೇನೆ.
ಅವರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ:

Gardner

https://www.goodreads.com/series/40509-perry-mason

Share this!

One Comment

Leave a Reply

Your email address will not be published. Required fields are marked *