ಉತ್ತರ ಪ್ರದಕ್ಷಿಣೆ- ಉತ್ತರ ಭಾರತ ತೀರ್ಥಯಾತ್ರೆಯ ಕಥನ- ಸಂಚಿಕೆ -7
ಸಂಚಿಕೆ 7:
ಕಾಶಿಯಲ್ಲಿ ನಡೆದ ಪಿತೃ ಕಾರ್ಯ ಮತ್ತು ಕಾಶಿ ವಿಶ್ವನಾಥ , ವಿಶಾಲಕ್ಷಿ ದರ್ಶನ ಮತ್ತು ನೂತನ ಅಮೋಘ ಕಾರಿಡಾರ್:
ಅಂದು ಬೆಳಿಗ್ಗೆ 5.30ಕ್ಕೆಲ್ಲಾ ತಯಾರಾಗಿ ನಾವು ಹೊರಟಿದ್ದೆವು. ಅಂದು ನಮಗೆ ಎಡಬಿಡದ ದಿನಪೂರ್ತಿ ಕಾರ್ಯಕ್ರಾಮಗಳು.
ಆಗ ಕಾಫಿ ಮಾತ್ರ ಕುಡಿದು ಪಂಚೆ ಶರ್ಟ್ ಧರಿಸಿ ನಾವು ಪುರುಷರು ಪಂಚಗಂಗಾ ಘಾಟ್ ಬದಿಯಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣರ ಗೋಕರ್ಣ ಮಠದಲ್ಲಿ ಶ್ರಾದ್ಧ ಕಾರ್ಯ ಮಾಡಿ ಅನಂತರ ಅಲ್ಲಿ ಪಿಂಡ ವಿಸರ್ಜನೆ ಮಾಡಿ ಅನಂತರ ಮುಖ್ಯ ದೇವಸ್ಥಾನಗಳನ್ನು ನೋಡುವುದಿತ್ತು. ಮೊದಲು ಪುರುಷರೆಲ್ಲಾ ಹೊರಟೆವು, ಎರಡನೇ ಬ್ಯಾಚಿನಲ್ಲಿ ನಮಗೆ ತಿಂಡಿ ತೆಗೆದುಕೊಂಡು ಬಂದರು ನಮ್ಮ ಮನೆಯವರು, ಹೆಂಗಸರು.
ಆದರೆ ಬಸ್ ಇಳಿದು ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ನಡೆಯುತ್ತಾ ನಾವು ಆ ಮುಂಜಾನೆಯೇ ನೋಡಿದ್ದು- ಕಾಲಭೈರವ ಸ್ವಾಮಿ ದೇವಸ್ಥಾನ ಮತ್ತು ಇನ್ನೊಂದು- ಮಹಡಿ ಮೇಲಿರುವ ಬಿಂದು ಮಾಧವ (ಕೃಷ್ಣ) ಸ್ವಾಮಿ ದೇವಸ್ಥಾನ. ಅದು ಯಾವುದೋ ಮಹಡಿಯಲ್ಲಿ ಏಕಿದೆ ಎಂದರೆ ಅದನ್ನು ಔರಂಗಜೇಬನು ಮಸೀದಿ ಕಟ್ಟಲು (ಇನ್ನೇತಕ್ಕೆ ?) ಹಳೆಯ ದೇವಸ್ಥಾನವನ್ನು ಹಾಳುಮಾಡಿ, ಮೂಲ ಮೂರ್ತಿಯನ್ನು ಕಿತ್ತೆಸೆದಾಗ , ಇದನ್ನು ಇಲ್ಲಿ ಹಲವು ವರ್ಷಗಳ ನಂತರ ಪುನರ್ನಿರ್ಮಾಣ ಮಾಡಿದ್ದು ಶಿವಾಜಿ ಮಹಾರಾಜ. ಈ ಮೂಲ ವಿಗ್ರಹವನ್ನು ನದಿಯಲ್ಲಿ ಮುಳುಗಿಸಿಟ್ಟುಕೊಂಡು ಧೂರ್ತರ ಕಣ್ಣಿಂದ ಮುಚ್ಚಿಡಲಾಗಿತ್ತಂತೆ. ಎಂತಹಾ ದುಃಸ್ಥಿತಿ ನೋಡಿ. ಕೆಲವೆಲ್ಲಾ ಮರೆಯಲಾಗದ ಚಾರಿತ್ರಿಕ ಕಹಿ ಸತ್ಯಗಳು!
ಹಾಗಾಗಿ ಎದುರಿನ ಕಟ್ಟಡದ ಮೊದಲನೆ ಮಹಡಿ ಹತ್ತಿ ನೋಡಿದರೆ ಅಲ್ಲಿ ಈ ಬಿಂದು ಮಾಧವ ಸ್ವಾಮಿಯ ದರ್ಶನವಾಗುತ್ತದೆ.
ಆ ಮಸೀದಿಯೂ ಈಗ ಪಾಳು ಬಿದ್ದಂತಿದೆ, ಗಂಗಾ ನದಿಗೆ ಮುಖ ಮಾಡಿಕೊಂಡಿದ್ದ ದೇವಸ್ಥಾನದ ಸ್ಥಳದಲ್ಲಿ ಅದು!
ಈ ಎರಡೂ ದೇವಸ್ಥಾನಗಳನ್ನು ಮುಂಜಾನೆ 6ರ ಸಮಯದಲ್ಲಿ ನಾವು ದರ್ಶನ ಮಾಡಿದ್ದು ಒಂದು ರೀತಿಯ ಅಲೌಕಿಕ ಆನಂದವನ್ನು ನೀಡಿತು.
ಆ ಬಿಂದು ಮಾಧವನ ಎದುರಿಗೇ ಈ `ವಿಷ್ಣುಕಾಶಿ’ ಎಂಬ ಭಾಗವಾದ ಇಲ್ಲಿ- ನಮ್ಮ ಕರ್ನಾಟಕದವರ ಗೋಕರ್ಣ ಮಠವಿದೆ.
ಅಲ್ಲಿ ನಮಗೆ ಮೊದಲು ಸ್ನಾನ ಮಾಡಲು ‘ಘಾಟಿಗೆ ಇಳಿಯಲು’ ಹೇಳುತ್ತಾರೆ. ಎಲ್ಲ ಕಡೆ ಪಿತೃ ಕಾರ್ಯ ಅದ ಮೇಲೆ ಸ್ನಾನವಾದರೆ ಕಾಶಿಯಲ್ಲಿ ಮೊದಲೇ ನದಿಯ ಸ್ನಾನ , ಇಲ್ಲಿಯ ಪದ್ಧತಿಯಂತೆ. ಮಠದ ಪಕ್ಕದಲ್ಲಿಯೇ ಕಡಿದಾದ ಹಲವಾರು ಮೆಟ್ಟಿಲುಗಳನ್ನು ಇಳಿದಾಗ ಪಂಚಗಂಗಾ ಘಟ್ ಎಂಬ ಸ್ನಾನ ಘಟ್ಟ ಸಿಗುತ್ತದೆ.
ಆಹಾ, ಬೆಳಿಗ್ಗೆ 6.30 ರ ಸಮಯದಲ್ಲಿ ಗಂಗಾ ನದಿಯ ಅಮೋಘ ದೃಶ್ಯ, ಸೂರ್ಯೋದಯ ಕಾಣುತ್ತಿದೆ, ನಿರ್ಮಲ ಪ್ರಶಾಂತ ವಾತಾವರಣ, ಹೆಚ್ಚು ಜನರೂ ಇಲ್ಲ. ಅಲ್ಲಿ ನಾವು ಗಂಗೆಯಲ್ಲಿ ಮೂರು ಬಾರಿ ಮುಳುಗೆದ್ದ ಮೇಲೆ ನೋಡಿದರೆ- ಅಲ್ಲಿ ಗಂಗಾ ಆರತಿ ನಡೆಯುತ್ತಿದೆ. ಅಲ್ಲಿಯೂ ಮುಖ್ಯ ಮಣಿಕರ್ಣಿಕಾ ಘಾಟಿನಲ್ಲಿದ್ದಂತೆ ಆದರೆ ಚಿಕ್ಕದಾಗಿ ಒಬ್ಬರೇ ತುಂಬಾ ಲಯಬದ್ಧವಾಗಿ ತಾಳಕ್ಕೆ ತಕ್ಕಂತೆ ಮಾಡುತ್ತಾರೆ. ಅದನ್ನು ನೋಡಿ ಆನಂದಿಸಿ, ಗಂಗೆಗೆ ನಮಿಸಿ ಒಣಗಿದ ಪಂಚೆ ಶಲ್ಯ ತೊಟ್ಟು ಮಠಕ್ಕೆ ಮೇಲೆ ಹತ್ತಿ ಹೋದೆವು.
ಇಲ್ಲಿ ಕಿರಣ್ ಆಚಾರ್ಯ ಎಂಬ ಬೆಂಗಳೂರಿನವರೇ ಆದ ಯುವ ಪುರೋಹಿತರು ಇದ್ದರು. ನಮಗೆ ಸ್ಪಷ್ಟವಾಗಿ ಸೂಚನೆಗಳನ್ನು ಕನ್ನಡದಲ್ಲೇ ಕೊಟ್ಟರು.
ಇಲ್ಲಿ ನಾವು 36 ಅನ್ನದ ಪಿಂಡಗಳನ್ನು ಕಟ್ಟುವುದಿತ್ತು. ನಾನು ಮತ್ತೊಮ್ಮೆ ವೇಗದಲ್ಲಿ ಹಿಂದೆ ಬಿದ್ದೆ, ಮತ್ತು ಶಡ್ಗ ಸುರೇಶರು ಸಹಾಯ ಮಾಡಿದಾಗ ಎಲ್ಲಾ ಕಟ್ಟಿ ಮುಗಿಸಿದೆ!! ಎಲ್ಲಾ ಹಿರಿಯ ಪಿತೃಗಳಿಗೆ ಮತ್ತು ಗುರುಗಳು, ಗೆಳೆಯರೂ, ಅಜ್ಞಾತರಿಗೂ ಪಿಂಡದಾನ ಮಾಡುವುದಿದೆ. ಅದನ್ನೆಲ್ಲಾ ಅದೇ ಪಂಚಗಂಗಾ ಘಾಟಿನಲ್ಲಿ ನದಿಗೆ ವಿಸರ್ಜನೆ ಮಾಡಿ ಬಂದ ನಂತರ ನಮಗೆ ತಿಂಡಿ. ಇಂದು ರಾಗಿದೋಸೆ ಚಟ್ನಿ ಕಳಿಸಿದ್ದರು, ಅದನ್ನು ಟಿಫಿನ್ ಬಾಕ್ಸಿನಲ್ಲಿ ನಮ್ಮ ಹೆಂಗಸರು ತಂದಿದ್ದರು. ಅದರ ನಂತರ ಹೆಂಗಸರಿಂದ ಕುಂಕುಮಾರ್ಚನೆ ಪೂಜೆ ಇತ್ತು. ಮಹಡಿಯ ಮೇಲೆ ಒಂದೊಂದು ಗುಂಪಿನಲ್ಲಿ ಮೂರು ನಾಲ್ಕು ಹೆಂಗಸರು ವೃತ್ತಾಕಾರವಾಗಿ ಕುಳಿತು ಮೇರು ಇಟ್ಟುಕೊಂಡು ಲಕ್ಷ್ಮಿ ಅಷ್ಟೋತ್ತರ ಕುಂಕುಮಾರ್ಚನೆ ಮಾಡಿದರು.
ಈ ಸಂಧರ್ಭದಲ್ಲಿ ನಾವು ತ್ಯಾಗ ಎಂದು ಒಂದು ಫಲ, ಒಂದು ಸಿಹಿತಿಂಡಿ ಮತ್ತು ಒಂದು ತರಕಾರಿಯನ್ನು ಬಿಟ್ಟುಬಿಡಬೇಕೆಂದರು ಅದನ್ನು ಗಯಾದಲ್ಲಿ ಮೂರನೆಯ ಕಾರ್ಯ ಆದ ಮೇಲೂ ಬಿಡಬಹುದು. ನಾನು ಗಯಾದಲ್ಲಿ ಅನಿಸುತ್ತದೆ, ಆಯ್ದ ಮೂರನ್ನು ಬಿಟ್ಟುಬಿಟ್ಟೆ. ಪತ್ನಿಯು ಸಹಾ ನನ್ನ ತರಹ ಇನ್ನೆಂದೂ ಅವನ್ನು ತಿನ್ನಬಾರದು. ಅವಳಿಗೆ ಹೇಳಿದಾಗ ಅವಳೂ ಅವಕ್ಕೆ ಒಪ್ಪಿದಳು.
ಅಲ್ಲಿಗೆ ಇಲ್ಲಿನ ಕಾರ್ಯಕ್ರಮ ಮುಗಿದು ನಾವೆಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದ ವಿಶ್ವನಾಥನ ದೇವಸ್ಥಾನದ ಹೊರ ಕಾರಿಡಾರ್ ಯೋಜನೆಯತ್ತ ಹೋಗುವುದಿತ್ತು.
ಕಾಶಿಯ ಸ್ಥಳ ಪುರಾಣ ಬಹಳ ವಿಶದವೂ ವೈವಿಧ್ಯಮಯವೂ ಆದದ್ದು. ಈ ನಗರವನ್ನು ಅನಾದಿ ಕಾಲದಲ್ಲಿ ಶಿವ ಮತ್ತು ವಿಷ್ಣು ಇಬ್ಬರೂ ಸೇರಿ ಸೃಷ್ಟಿಸಿ ಅರ್ಧರ್ಧ ಪರಸ್ಪರ ದಾನ ಕೊಟ್ಟುಕೊಂಡರಂತೆ. ಇಲ್ಲಿ ಶಿವ ಕಾಶಿ ಭಾಗ ಮತ್ತು ವಿಷ್ಣು ಕಾಶಿ ಭಾಗ ಎಂದಿದ್ದು ಎರಡೂ ಪಂಥದವರಿಗೆ ಅತಿ ಶ್ರೇಷ್ಟ ಸ್ಥಾನವಾಗಿದೆ.
ಇಲ್ಲಿನ ವಿಶ್ವನಾಥ ಸ್ವಾಮಿ ದೇವಸ್ಥಾನ ಭಾರತದ ಸನಾತನ ಧರ್ಮದ ಅತ್ಯಂತ ಪ್ರತಿಷ್ಟಿತ ಪುಣ್ಯ ಸ್ಥಳಗಳಲ್ಲಿ ಮೊದಲನೆಯದಾಗಿದೆ. ಆದಿ ಶಂಕರರು ಇದನ್ನು ಮುಖ್ಯ ಶಿವ ಸ್ಥಾನವಾಗಿ ಪೂಜಿಸಿದರೆ, ತುಳಸೀದಾಸರು ಇಲ್ಲಿ ರಾಮಚರಿತಮಾನಸವನ್ನು ಬರೆದರಂತೆ.
2017ರ ನಂತರ ಯೋಗಿ ಆದಿತ್ಯನಾಥರ ಸರಕಾರದ ಬೃಹತ್ ಜೀರ್ಣೋದ್ಧಾರ ಯೋಜನೆ , ಸ್ವಚ್ಚ ಭಾರತ ಮತ್ತು ನಗರ ನಿರ್ಮಲೀಕರಣದ ಕಾರಣದಿಂದ ವಾರಣಾಸಿ ಎಂದು ಕರೆಯಲ್ಪಡುವ ಈ ನಗರ ಇನ್ನೂ ಹೊಸ ಹೊಸ ರೂಪ ಪರಿವರ್ತನೆ ಹೊಂದುತ್ತಾ ಬೆಳೆಯುತ್ತಾ ಬಂದಿದೆ. 1983ರ ಸಮಯದಲ್ಲಿ ನಾನು ಕಾಲೇಜಿನ ಆಲ್ ಇಂಡಿಯಾ ಪ್ರವಾಸದಡಿಯಲ್ಲಿ ಇಲ್ಲಿಗೆ ಬಂದು ವಿಶ್ವನಾಥನ ದರ್ಶನ ಮಾಡಿದ್ದುಂಟು. ಆಗ ನಾವು ಇದೇ ರೀತಿಯ ಕಿರಿದಾದ ಸಂದುಗೊಂದುಗಳಲ್ಲಿ ಸುತ್ತಿ ಸುತ್ತಿ ಇದ್ದಕ್ಕಿದ್ದಂತೆ ಎಲ್ಲೋ ಮೂಲೆಯಲ್ಲಿ ಸಿಕ್ಕ ಒಂದು ಬಾಗಿಲು ತೆರೆದು ದೇವಸ್ಥಾನದ ಒಳಗೆ ಹೊಕ್ಕಂತೆ ನೆನಪಿದೆ. ಅಲ್ಲೇ ಶಿವಲಿಂಗ, ಪಕ್ಕದಲ್ಲೇ ದೊಡ್ಡ ಮಸೀದಿ ಕಟ್ಟಡ ಇತ್ತು. ಅದೇ ನನ್ನ ಮನಸ್ಸಿನಲ್ಲಿ ಇನ್ನೂ ಚಾಪು ಮೂಡಿಸಿತ್ತು. ಅದೇ ಪರಿಕಲ್ಪನೆಯಲ್ಲಿ ನಾನು ಇಂದು ಕಾಶಿಯ ಪ್ರವೇಶ ಗಲಿಯಲ್ಲಿ ನಡೆದಾಗ ಕಣ್ಣೆದುರಿಗೇ ಬದಲಾವಣೆ ಕಾಣಸಿಗುತಿತ್ತು.
ಹೌದು ಇಂದಿಗೂ ಆ ಗಲಿಗಳು ಕಿಷ್ಕಿಂದವೇ, ಸುತ್ತಲೂ ಚಿಕ್ಕ ಚಿಕ್ಕ ಮನೆ ಅಂಗಡಿಗಳ ನಡುವೆ ಎರಡೂ ದಿಕ್ಕಿನ ಟ್ರಾಫಿಕ್ ಇದೆ, ಅಲ್ಪ ಸ್ವಲ್ಪ ಕೊಳಕೂ ಇದೆ. ಎಚ್ಚರಿಕೆಯಿಂದ ಗ್ರೂಪ್ ಮಿಸ್ ಆಗದಂತೆ ಚಲಿಸಬೇಕು. ಆ ಗಲಿಯನ್ನೆಲ್ಲಾ ಒಡೆದು ಅಗಲೀಕರಣ ಮಾಡಿ ಮತ್ತೆ ಕಟ್ಟಲಸಾಧ್ಯ. ಹಾಗೆ ಮಾಡಿದರೆ ಅಲ್ಲಿಯ ನೇಟಿವಿಟಿಯೇ ಹೋಗಿಬಿಡುತ್ತದೆ. ಆದರೆ ಈಗ ನಿಜಕ್ಕೂ ಅದನ್ನು ಸ್ವಚ್ಚಗೊಳಿಸಿದ್ದಾರೆ. ಹಳೆ ಮತ್ತು ಹೊಸ ವಾರಣಾಸಿಯನ್ನು ನಾವು ಹೋಲಿಸಿದಾಗ 80% ಸ್ವಚ್ಚತೆಯನ್ನು ನಿಸ್ಸಂದೇಹವಾಗಿ ಕಾಣಬಹುದು.
ಇದಕ್ಕೆ ಸಂಕಲ್ಪ ಮಾಡಿದ ಬಿಜೆಪಿ ಸರಕಾರ ಮತ್ತು ಖುದ್ದಾಗಿ ಇಲ್ಲಿನ ಎಂ ಪಿ ಆದ ಪ್ರಧಾನಿ ಮೋದಿಯವರ ಕಾರ್ಯಶೀಲತೆಯ ಫಲಿತಾಂಶ ನಮ್ಮ ಮುಂದಿದೆ. ಅಲ್ಲಿಯೇ ಬೆರಗುಗೊಳ್ಳುತ್ತಾ ನಾವು ಹೆಜ್ಜೆಯಿಡುತ್ತಾ ನಡೆದೆವು. ಸುತ್ತಲೂ ಎಲ್ಲಾ ಕಟ್ಟಡಗಳಲ್ಲಿಯೂ ದೇವಸ್ಥಾನಗಳು, ಸ್ವೀಟ್ಸ್ ದುಕಾನುಗಳೇ ಇವೆ. ಮಹಡಿಯಲ್ಲಿ ಅವರದೇ ಮನೆಗಳು.
ಅತಿ ಧೀರ್ಘವಾದ ನಡೆಯ ನಂತರ ಕೊನೆಗೆ ನಾವು ಹೊಸ ಪ್ರವೇಶ ಕಾರಿಡಾರ್ ಬಳಿಗೆ ತಲುಪಿದೆವು.
ಇದರ ಬಗ್ಗೆ ವಿವರ ಹೇಳಲೇ ಬೆಕು, ಇಲ್ಲದಿದ್ದರೆ ನ್ಯಾಯ ಸಲ್ಲಿಸಿದಂತಾಗುವುದಿಲ್ಲ.
ಮಣಿಕರ್ಣಿಕಾ ಘಾಟಿ ನದಿ ತೀರದಿಂದ ಸುಂದರವಾದ ಮಹಾದ್ವಾರ, ವಿಶಾಲವಾದ ಅಂಗಳ ಹಂತಹಂತವಾಗಿ ಏರುವ ಮೆಟ್ಟಿಲುಗಳು ಒಂದು ರೀತಿಯ ambience ಅನ್ನುತಾರಲ್ಲ, ಅಂತಹ ಕಾತರದ ನಿರೀಕ್ಷೆಯನ್ನೂ, ಸಾರ್ಥಕತೆಯನ್ನೂ ಖಂಡಿತಾ ನಾವೀಗ ಅನುಭವಿಸಬಹುದು,
ಉಫ್! ಮೊದಲು ಗಿಜಿಗುಡುತ್ತಿದ್ದ ಪ್ರವೇಶದ ಗೊಜಾಗೊಂಡಲ ಗಲ್ಲಿಗಳು ಸಂಪೂರ್ಣವಾಗಿ ಮಾಯವಾಗಿವೆ! ಯಾವುದೋ ಬೃಹತ್ ಸ್ಮಾರಕವನ್ನು ಆರಾಮವಾಗಿ ಪ್ರವೇಶಿಸುವ ಅನುಭೂತಿ ಆಗುತ್ತದೆ. ವಿವಾದಕ್ಕೆ ಬಿದ್ದಿರುವ ಅನಾಥವಾಗಿ ಶಿಥಿಲವಾದಂತೆ ಕಾಣುವ ಗ್ಯಾನವಪಿ ಮಸೀದಿ ಕೂಡಾ ಇದೀಗ ಹೊಸ ಕಾರಿಡಾರಿನ ಕಾಂಪೌಂಡ್ ಒಳಗೇ ಸೇರಿಬಿಟ್ಟಿದೆ (ಇದೊಂದು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಎನ್ನುತ್ತಾರೆ ಬಲ್ಲವರು). ಹಳೆಯ ದೇವಸ್ಥಾನದಲ್ಲಿ ಶಿವ ಮುಖಿಯಾಗಿದ್ದ ನಂದಿಯು ಈಗ ಕಟಕಟೆಯ ಹೊರಗಿರುವ ಮಸೀದಿ ಕಟ್ಟಡವನ್ನು ನಿರಾಸೆಯಿಂದ ದಿಟ್ಟಿಸುತ್ತಿರುವಂತಿದೆ. ಅಲ್ಲಿ ಶಿವ ಮಂದಿರ ಇದ್ದಿರಲೇ ಬೇಕು ತಾನೆ? ಯಾವುದಾದರೂ ನಂದಿ ವಿಗ್ರಹ ಮಸೀದಿಯ ಬಾಗಿಲು ನೋಡುತ್ತಿರುತ್ತದೆಯೆ?
ಅಲ್ಲಿದ್ದ ಮುಖ್ಯ ಲಿಂಗವನ್ನು ಮೊಘಲ್ ದಾಳಿಕೋರ ಸೈನಿಕರಿಂದ ರಕ್ಷಿಸಲು ಅದರ ಅರ್ಚಕರು ಎದುರಿನ ಬಾವಿಯಲ್ಲಿ ಹಾಕಿದ್ದರಂತೆ. ಈಗ ಈ ಬಾವಿಯನ್ನೂ ಇದೇ ವಿಶಾಲವಾದ ಅಂಗಳದೊಳಗೇ ಕಾಣಬಹುದು. ಅದಕ್ಕೆ ಹೊದಿಸಿರುವ ಬಟ್ಟೆಯ ಮೇಲೆ ಭಕ್ತರು ಕಾಣಿಕೆ, ದಕ್ಷಿಣೆ ಹಾಕಬಹುದು.
ಈ ಪವಾಡ ಸದೃಶ ಎನಿಸುವ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ನಮ್ಮ ಮ್ಯಾನೇಜರ್ ಬಿಚ್ಚಿಟ್ಟರು:
ಆ ಸುತ್ತ ಮುತ್ತಲಿನ ಗಲಿಗಳಲ್ಲಿ ಸುಮಾರು 3600ಕ್ಕೂ ಹೆಚ್ಚು ಚಿಕ್ಕ ಪುಟ್ಟ ಅಕ್ಕಪಕ್ಕದಲ್ಲೇ ಸ್ವಲ್ಪವೂ ಅಂತರವಿಲ್ಲದೇ ಕಟ್ಟಿದ ಕಟ್ಟಡಗಳಿದ್ದವಂತೆ. ಯಾವಾಗ ಸರಕಾರ ಈ ಯೋಜನೆ ಮಾಡುವುದಾಗಿ ಘೋಷಿಸಿತೋ, ಡಬಲ್ ಎಂಜಿನ್ ತರಹ ಮೋದಿಜಿ ಮತ್ತು ಯೋಗಿಜೀ ಇಲ್ಲಿ ಬಿಡಾರ ಹೂಡಿದರಂತೆ. ದಿನವೂ ಈ ಕಟ್ಟಡ ಮಾಲೀಕರ ಜೊತೆ ಮಾತುಕತೆ: ‘ತೆರವು ಮಾಡಿಸಲು ಎಷ್ಟು ಪರಿಹಾರ ಧನ ಬೇಕು, ಲಕ್ಷದಲ್ಲಿ ಹೇಳಿ’ ಎನ್ನುವರಂತೆ. ‘ಇದನ್ನು ಬಿಟ್ಟುಕೊಟ್ಟು ನೀವೆಲ್ಲಾದರೂ ಬೇರೆ ಕಡೆ ಹೋಗಿ; ನಾವೇ ಬೇಕಾದರೆ ಅದಕ್ಕೂ ಸಹಾಯ ಮಾಡುತ್ತೇವೆ, ಆದರೆ ಇದನ್ನು ನಾವು ಒಡೆದು ದೊಡ್ಡ ಕಾರಿಡಾರ್ ಕಟ್ಟುವುದಿದೆ. ನೀವಿಲ್ಲಿಂದ ಬಿಟ್ಟು ಹೋಗುವುದಿಲ್ಲ ಅನ್ನುವಂತಿಲ್ಲ. ಹಾಗಾಗಿ ನೀವು ನಿಂನಿಮ್ಮ ಪತ್ರಗಳಿಗೆ ಸಹಿ ಹಾಕಿ, ಹಣ ಪಡೆಯಿರಿ’ ಎಂದು ಬಿಗಿಪಟ್ಟು ಹಿಡಿದರಂತೆ. ಕೊನೆಗೂ ಎಲ್ಲರನ್ನೂ ಮನವೊಲಿಸಿ ಯಾವುದೇ ಕೋರ್ಟ್ ವ್ಯಾಜ್ಯ ಇಲ್ಲದಂತೆ ಇದನ್ನು ಬಗೆಹರಿಸಿದರಂತೆ.
ಪ್ರತಿ ಗಲ್ಲಿಯಲ್ಲೂ ದಿನಕ್ಕೆ ನಾಲ್ಕು ಬಾರಿ ಕಸ ನಿರ್ಮೂಲನ ಮಾಡಿ ತೋರಿಸಿ ಒಂದು ವರ್ಷದಲ್ಲಿ ಅಲ್ಲಿನ ಜನರ ವರ್ತನೆಯನ್ನೇ ಬದಲಿಸಲು ಪಟ್ಟು ಹಿಡಿದರಂತೆ. ಹಾಗಾಗಿ, ಮನ ಪರಿವರ್ತನೆಯಾಗಿ ನಾಗರೀಕರೇ ಬೀದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿದರಂತೆ. ಇವೆಲ್ಲವೂ ದಾಖಲಿತ ಸತ್ಯ ಮತ್ತು ಒಂದು ಸರಕಾರದ ಕಾರ್ಯಶೀಲತೆ ಮತ್ತು ಛಲದ ಪ್ರತೀಕ. ಇವೆಲ್ಲಾ ಖಂಡಿತಾ ಸ್ಪೂರ್ತಿದಾಯಕ ಮತ್ತು ಇತರ ರಾಜ್ಯಗಳಿಗೂ ಅನುಕರಣೀಯ ಸಹಾ. ನಿಧಾನವಾಗಿ ಆದರೆ ಖಚಿತವಾಗಿ ಉತ್ತರ ಪ್ರದೇಶದ ಹಣೆಬರಹವನ್ನು ಇವರು ತಿದ್ದಿ ಬರೆಯುತ್ತಿದ್ದಾರೆ. ಹಾಗಾಗಿಯೇ ಜನಪ್ರಿಯ ಸರ್ಕಾರಕ್ಕೆ ಎರಡನೇ ಅವಕಾಶ ಸಿಕ್ಕಿದ್ದು ಎನ್ನುತ್ತಾರೆ ಇಲ್ಲಿನವರು.
ಇದೀಗ ಈ ಬೃಹತ್ ಪ್ರವೇಶ ಪ್ರಾಂಗಣದಲ್ಲಿ ಎಲ್ಲ ಸುವ್ಯವಸ್ಥಿತವಾಗಿ ಕಾಣುತ್ತದೆ. ಪ್ರವಾಸಿಗಳ ಪಾದರಕ್ಷೆ, ಲಗೇಜ್ ಇಡಲು ಸೌಕರ್ಯವಾದ ಸ್ಥಳ. ಎಲ್ಲೆಲ್ಲೂ ನೆಲವನ್ನು ಗುಡಿಸಿ ಸಾರಿಸಿ ಹೊಳೆಯುವಂತಿಟ್ಟಿರುವ ಸಿಬ್ಬಂದಿ, ಸುತ್ತಲಿನ ಚಿಕ್ಕ ದೇವಸ್ಥಾನಗಳಿಗೆ ಹೋಗಿ ಬರಲು ನಿರ್ದಿಷ್ಟ ಸಾಲುಗಳು ಹೀಗೆ.
ಮೊದಲಿಗೆ ಭಾರತ ಮಾತೆಯ ಶಿಲೆಯಿದೆ. ಇ.1780 ರಲ್ಲಿ ಈ ದೇವಸ್ಥಾನಕ್ಕೆ ಎರಡನೇ ಸಲ (ಈಗಿರುವ) ಶಿವ ಲಿಂಗ ಕೊಟ್ಟು ದೇವಸ್ಥಾನ ಕಟ್ಟಿಸಿಕೊಟ್ಟ ರಾಣಿ ಅಹಲ್ಯಾಬಾಯಿ ಹೋಳ್ಕರ್ ರವರ ಗೌರವಾರ್ಥವಾಗಿ ಅವರ ಶಿಲೆಯಿದೆ. ಆಕೆ ಹೀಗೆ ನೂರಾರು ಪುಣ್ಯಕ್ಷೇತ್ರಗಳಲ್ಲಿ ಪ್ರಮುಖ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಮಾಡಿದ ಮಹಾರಾಣಿ.
ಅವರ ಬಗ್ಗೆ ವಿಕಿಪಿಡಿಯಾದಲ್ಲಿ ಓದಿ. (https://en.wikipedia.org/wiki/Ahilyabai_Holkar)
ಮುಖ್ಯ ದೇವಸ್ಥಾನದ ಗೋಪುರಕ್ಕೆ ಹಿಂದಿದ್ದ ಹಳೇ ಚಿನ್ನದ ತಗಡಿನ ಪದರವಲ್ಲದೇ, ಇತ್ತೀಚೆಗೆ ಆಂಧ್ರದ ಭಕ್ತರೊಬ್ಬರು 50 ಟನ್ ಬಂಗಾರ ಏನೋ, ದಾನ ಕೊಟ್ಟಿದ್ದು ಸೇರಿ ಹೊಸ ಚಿನ್ನದ ಹಾಳೆ ಮಾಡಿಸಿ ತೊಡಿಸಿದ್ದಾರೆ. ಮೂಲ ವಿಶ್ವನಾಥ ಶಿವಲಿಂಗ ಭೂಮಿಗಿಂತಾ ಒಂದಡಿ ಕೆಳಗೇ ಇದ್ದಂತೆ ಕಾಣುತ್ತದೆ. ಅದಲ್ಲದೇ ವಿಶೇಷ ಪೂಜೆ ಎಂದು ನಾವೇನಾದರೂ ಕೊಟ್ಟರೆ- ಕೆಲವು ಚಿಕ್ಕ ಚಿಕ್ಕ ಶಿವಲಿಂಗಗಳಿಗೆ ಭಕ್ತಾದಿಗಳು ತಾವೇ ಅಭಿಷೇಕ ಮಾಡಬಹುದು. ಅಲ್ಲಿಂದ ಕೊನೆಯದಾಗಿ ಮೂಲ ಲಿಂಗಕ್ಕೆ ರುದ್ರಾಭಿಷೇಕ ಮಾಡಲು ಹೊರಗಿನಿಂದ ಮೆಟಲ್ ದೋಣಿಯ ತರಹ ನಾಲ್ಕು ಬಾಗಿಲಿಗೂ ಒಂದೊಂದು ಕಾಲುವೆ ಮಾಡಿದ್ದಾರೆ. ಅದರಲ್ಲಿ ಭಕ್ತರು ಸುರಿದ ಅಭಿಷೇಕದ ಹಾಲು ಶಿವಲಿಂಗದ ಮೇಲೆ ನೇರವಾಗಿ ಬೀಳುತ್ತದೆ.
ಅಲ್ಲಿಂದ ಹೊರಟಿದ್ದು- ಪಕ್ಕದ ಗಲಿಯಲ್ಲಿದ್ದ ವಿಶಾಲಾಕ್ಷಿ ಮಂದಿರ ಪುರಾತನವಾದದ್ದು ಅದಿನ್ನೂ ಕಂಚಿ ಕಾಮಕೋಟಿ ಮಠದ ಅಧೀನದಲ್ಲಿದೆ, ಅಲ್ಲಿ ದೇವಿಯ ದರ್ಶನ ಮಾಡಿ, ಮತ್ತೆ ಅದರ ಅಕ್ಕ ಪಕ್ಕದಲ್ಲೇ ಇರುವ ಅನ್ನಪೂರ್ಣ ದೇವಿಯ ದೇವಾಲಯದಲ್ಲಿ ಮುಕ್ಕಾಲು ಗಂಟೆ ಕುಳಿತು ಕಾದಿದ್ದು ಮಾತೆಯ ದರ್ಶನ ಮಾಡಿ ಹೊರಬಂದೆವು. ಇವೆಲ್ಲವೂ ಬಹಳ ಪಾವನವಾದ ಭಕ್ತಿ ಭಾವ ತುಂಬುವ ಅನುಭವ. ನೀವೇ ಖುದ್ದಾಗಿ ಅನುಭವಿಸತಕ್ಕದ್ದು.
ಈ ಮೂಲಲಿಂಗಕ್ಕೆ ರುದ್ರಾಭಿಷೇಕ ಕಾರ್ಯಕ್ರಮ ಇದೆಯಲ್ಲ, ನಾವು ಅದನ್ನು ಇನ್ನೂ ಒಂದು ಗಂಟೆ ಕಾದಿದ್ದು ಮಾಡಬೇಕಿತ್ತು. ನಮ್ಮ ಶಡ್ಗ , ನಾದಿನಿ ಮತ್ತು ನನ್ನ ಪತ್ನಿ ಅದಕ್ಕಾಗಿ ಕೆಲವರೊಂದಿಗೆ ಅಲ್ಲಿಯೇ ಉಳಿದುಕೊಂಡರು. ಇನ್ನೂ ಇದಕ್ಕಾಗಿ ಇದ್ದರೆ ಹೋಟೆಲಿಗೆ ಹೋಗಿ ಊಟ ಮಾಡಲು ತುಂಬಾ ಲೇಟ್ ಆಗಬಹುದೆಂದು ನಾವು ಹೆಚ್ಚಿನವರು ಹೊರಟುಬಿಟ್ಟೆವು. ನಾನೂ ಹಾಗೆ ಹೊರಟವರಲ್ಲಿದ್ದೆ!
ಮತ್ತೆ ಅದೇ ಗಲಿಗಳಲ್ಲಿ ಸುಧೀರ್ಘವಾದ ದಾರಿ ಸವೆಸುತ್ತಾ ವಾಪಸ್ಸು ನಡೆದು ನಮ್ಮ ಬಸ್ ತಲುಪಿ ಅದರಲ್ಲಿ ಹೋಟೆಲ್ ಸೇರಿದೆವು. ಆಗಂತೂ ಬಹಳ ಆಯಾಸವೇ ಆಗಿತ್ತು ಅನ್ನಿ. ಕಾಲುಗಳು ಪದ ಹೇಳುತ್ತಿದ್ದವು ಅನ್ನುತ್ತಾರಲ್ಲ ಹಾಗೆ!. ಇದಕ್ಕೆಲ್ಲಾ ಬಹಳ ಫಿಟ್ನೆಸ್ಸ್ ಇರಬೇಕು ನೋಡಿ. ನಾನಿನ್ನೂ ಅದನ್ನು ಹೆಚ್ಚಿಸಿಕೊಳ್ಳಬೇಕು ಎನಿಸಿತು. ಆದರೆ ಇಷ್ಟೊಂದು ನಡೆಗೆ ತಯಾರಾಗುವುದು ಸುಲಭವೂ ಅಲ್ಲ... 3-4 ಕಿಮೀ ಇರಬಹುದೇನೋ ಅವತ್ತಿನ ದಿನಕ್ಕೆ! ಅದರ ಜೊತೆಗೆ ಸ್ನಾನದ ಘಾಟ್ ಎರಡು ಸಲ ಹತ್ತುವುದು ಇಳಿಯುವುದು, ಕರ್ಮ ಮಾಡುವುದು, ನದಿ ಸ್ನಾನ ಎಲ್ಲವೂ ಒಂದೇ ದಿನ. ಅಲ್ಲದೇ ಕಳೆದು ಎಂಟು ದಿನದಿಂದ ಹೀಗೆಯೇ ಆಗುತ್ತಲೂ ಇತ್ತು, ಅದೆಲ್ಲಾ ಸೇರಿಕೊಳ್ಳುತ್ತದೆ ಶ್ರಮಕ್ಕೆ.
ಅಂದು ಹೋಟೆಲ್ ತಲುಪಿದರೆ ಅಡಿಗೆಯವರು ಅಲ್ಲೇ ಇದ್ದು ಸಾವಕಾಶವಾಗಿ ತಯಾರಿಸಿದ ಶ್ರಾದ್ಧಕ್ಕೆ ಮಾಡುವಂತಹಾ ರವೆ ಉಂಡೆ, ವಡೆ, ಪಾಯಸ ಸೇರಿದ ಭಾರಿ ಅಡಿಗೆ ಮಧ್ಯಾಹ್ನದ ಭೋಜನಕ್ಕೆ. ಹಾ, ಮತ್ತೆ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಅಡಿಗೆ. ಅವತ್ತು ಬೆಳಿಗ್ಗೆ ಆ ಕಾರ್ಯ ಮಾಡಿದೆವಲ್ಲ! ನಿರ್ಮಲಾ ಟ್ರಾವೆಲ್ಸ್ ನವರು ಇದನ್ನೆಲ್ಲಾ ಪಾಲಿಸುತ್ತಾರೆ, ಚಿಂತೆಯಿಲ್ಲ.
ನಾನಂತೂ ಊಟಮಾಡಿ ರೂಮಿನಲ್ಲಿ ಸ್ವಲ್ಪ ಮಾತ್ರೆ ತೆಗೆದುಕೊಂಡು ಮಲಗಿಬಿಟ್ಟೆ. ಒಂದೆರಡು ಗಂಟೆ ನಂತರ ಅಭಿಷೇಕ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗಿದ ಪತ್ನಿ ಮತ್ತು ನೆಂಟರು, ಅಲ್ಲಿ ಅನ್ನಪೂರ್ಣ ಮಂದಿರದಲ್ಲಿ ಒಳ್ಳೆಯ ಊಟ (ಅನ್ನ ಸಂತರ್ಪಣೆ) ಹಾಕಿದರಂತೆ, ಅದನ್ನು ಸ್ವೀಕರಿಸಿ ಬಂದಿದ್ದರು.
ಅವತ್ತು ಸಂಜೆ ಹೋಟೆಲ್ ಹೊರಗೆ ಹೋಗಿ ಕೆಲವರು ಬನಾರಸ್ ಸಿಲ್ಕ್ ಇತ್ಯಾದಿ ಅಂಗಡಿಗಳಿಗೆ ಲಗ್ಗೆಯಿಟ್ಟರು. ಕೆಲವರು ನಾವು ಸ್ವೀಟ್ಸ್ ಕೊಂಡುಕೊಂಡೆವು, ಕೊನೆಗೆ ನಾನು ಬನಾರಸಿ ಪಾನ್ ಅಂಗಡಿ ನೋಡಿ ಅಲ್ಲಿನ ಜನಪ್ರಿಯ ಮೀಠಾ ಪಾನ್ ತಿಂದೆ, ರುಚಿಯಾಗಿರುತ್ತದೆ.( ‘ಖಾಯ್ ಕೆ ಪಾನ್ ಬನಾರಸ್ ವಾಲಾ’ ಎಂಬ ಎಲ್ಲರೂ ಕೇಳಿರುವಂತಹಾ ಕಿಶೋರ್ ಕುಮಾರ್ ಗೀತೆಯಿಲ್ಲವೆ, ಡಾನ್ ಚಿತ್ರದ್ದು , ಅದಕ್ಕಾಗಿ).
ಅವತ್ತು ರಾತ್ರಿಯ ಊಟದ ನಂತರ ಕಾಶಿ ಪ್ರವಾಸದ ಹಂತ ಮುಗಿದಂತಾಗಿತ್ತು.
ಬೆಳಿಗ್ಗೆ ಎದ್ದು ಹೋಟೆಲಿನಿಂದ ಚೆಕ್ ಔಟ್ ಆಗಿ ಗಯಾ/ ಬೋಧ ಗಯಾಕ್ಕೆ ಪ್ರಯಾಣ ಬೆಳೆಸುವುದಿತ್ತು...
ಸಂಚಿಕೆ 8>>> ಬರುತ್ತದೆ!
Kommentare